ದೊಡ್ಡಬಳ್ಳಾಪುರ: ಡಾ.ಆಂಜಿನಪ್ಪ ಹಾಗೂ ನಾರಾಯಣಗೌಡ ನೇತೃತ್ವದ ತಂಡವು ಸಮುದಾಯದಲ್ಲಿ ಬದಲಾವಣೆ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಧಾರಣೆ ತರುವ ಗುರಿಯೊಂದಿಗೆ ಚುನಾವಣಾ ಕಣಕ್ಕೆ ಧುಮುಕ್ಕಿದ್ದೇವೆ ಎಂದು ಒಕ್ಕಲಿಗರ ಕಾರ್ಯಕಾರಿ ಸಮಿತಿಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಉಮಾಪತಿ ಶ್ರೀನಿವಾಸ ಗೌಡ ಹೇಳಿದರು.
ದೊಡ್ಡಬಳ್ಳಾಪುರ ನಗರ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ತಂಡದಲ್ಲಿರುವ ಅಭ್ಯರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ, ಸಿನಿಮಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಅನುಭವವನ್ನು ಬಳಸಿಕೊಂಡು ಒಕ್ಕಲಿಗ ಸಮುದಾಯದಲ್ಲಿ ಹೊಸ ಬದಲಾವಣೆ ತರುವ ಆಶಯವನ್ನು ಹೊಂದಿದ್ದೇವೆ.
ಸಮುದಾಯದ ಸರ್ವಾಂಗೀಣ ಅಭಿವೃದ್ಧಿ: ನಾವು ಸಮುದಾಯದ ಸರ್ವಾಂಗೀಣ ಅಭಿವೃದ್ಧಿಯಾಗಬೇಕೆಂಬ ಕಲ್ಪನೆಯನ್ನು ಇಟ್ಟುಕೊಂಡಿದ್ದೇವೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಒಕ್ಕಲಿಗ ಸಂಘದ ಸುಧಾರಣೆಗಾಗಿ ನಮ್ಮದೇ ಆದ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡಿದ್ದೇವೆ. ಉತ್ಸಾಹಿ ಯುವಕರ ತಂಡ ನಮ್ಮದಾಗಿರುವುದರಿಂದ ಮತದಾರರ ನಮ್ಮನ್ನು ವಿಜಯಶಾಲಿಯಾಗಿ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು.
ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ: ನಮ್ಮ ಸಮುದಾಯದ ಪೂಜ್ಯರು ನಿರ್ಮಲಾನಂದನಾಥ ಶ್ರೀಗಳು, ನಂಜಾವಧೂತ ಶ್ರೀಗಳು ಸೇರಿದಂತೆ ನಮ್ಮ ಹಿತೈಷಿ ರಾಜಕಾರಣಿಗಳು ಸಲಹೆ ಹಾಗೂ ಸೂಚನೆ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಮತದಾರರು ಆಶೀರ್ವದಿಸಿದರೆ ಖಂಡಿತ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮಠ ಮಂದಿರಗಳಲ್ಲಿ ವಿದ್ಯಾಭ್ಯಾಸ: ನಾನು ಹುಟ್ಟುತ್ತಲೇ ಕುಬೇರನಲ್ಲ. ನಾನು ಕೂಡ 9 ವರ್ಷಗಳ ಕಾಲ ಆದಿಚುಂಚನಗಿರಿ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ನಮ್ಮ ಸಮುದಾಯದ ಕಷ್ಟ ಕರ್ಪಣ್ಯಗಳನ್ನು ಅನುಭವಿಸಿದ್ದೇನೆ, ಕಂಡಿದ್ದೇನೆ. ಹೀಗಾಗಿ ನ್ಯಾಯ ಒದಗಿಸುವ ಸಲುವಾಗಿ ಬಂದಿದ್ದೇನೆ. ಇದು ಮನೆಯೊಳಗೆ ನಡೆಯುತ್ತಿರುವ ಚುನಾವಣೆ. ಈ ಚುನಾವಣೆ ಹಿಂದಿನ ಎಲ್ಲ ಚುನಾವಣೆಗಿಂತಲೂ ವಿಶಿಷ್ಟ ಮತ್ತು ವಿಭಿನ್ನವಾಗಿದೆ. ಮತದಾರರು ಬದಲಾವಣೆಯನ್ನು ಎದುರು ನೋಡುತ್ತಿದ್ದಾರೆ ಎಂದರು.
ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ: ನಾವು ಗೆದ್ದರೆ ಏನು ಮಾಡುತ್ತೇವೆ ಎಂದು ಜನತೆಯ ಮುಂದಿಡಲಿದ್ದೇವೆ. ನಮ್ಮದು ಬೇರೆಯವರಂತೆ ಭರವಸೆಯಾಗಿ ಉಳಿಯುವುದಿಲ್ಲ. ಕೊಟ್ಟ ಮಾತನ್ನು ನೂರಕ್ಕೆ ನೂರು ಈಡೇರಿಸುತ್ತೇವೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….