ಬೆಂಗಳೂರು: ಕರೆನ್ಸಿ ನೋಟುಗಳ ಮೇಲೆ ಸುಭಾಷ್ ಚಂದ್ರ ಬೋಸ್ ಅವರ ಫೋಟೋ ಮುದ್ರಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ 8 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕಲ್ಕತ್ತಾ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೊಂಡಿರುವ 94 ವರ್ಷದ ಹರೀಂದ್ರನಾಥ್ ಬಿಸ್ವಾಸ್ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ್ ಹಾಗೂ ನ್ಯಾಯಮೂರ್ತಿ ರಾಜಶ್ರೀ ಭಾರದ್ವಾಜ್ ಅವರಿದ್ದ ವಿಭಾಗೀಯ ಪೀಠ ಕೇಂದ್ರದ ನಿಲುವು ತಿಳಿಸುವಂತೆ ಸೂಚಿಸಿದೆ.
ಅರ್ಜಿಯಲ್ಲಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ಆದರೆ, ಭಾರತ ಸರ್ಕಾರ ಅವರಿಗೆ ಅಗತ್ಯ ಮಾನ್ಯತೆಯನ್ನೇ ನೀಡಿಲ್ಲ. ಆದ್ದರಿಂದ, ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಫೋಟೋ ಮುದ್ರಿಸುವಂತೆಯೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಫೋಟೋ ಕೂಡ ಮುದ್ರಿಸುವಂತೆ ಆದೇಶಿಸಬೇಕು ಎಂದು ಕೋರಿದ್ದಾರೆ. ಇಂದು ನಡೆದ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ವೈ.ಜೆ ದಾಸ್ತೂರ್ ಪೀಠಕ್ಕೆ ಮನವಿ ಮಾಡಿ, ಈ ಕುರಿತು ಪರಿಶೀಲಿಸಿ ನಿಲುವು ತಿಳಿಸಲು 8 ವಾರ ಕಾಲಾವಕಾಶ ನೀಡುವಂತೆ ಕೋರಿದರು. ಮನವಿ ಪುರಸ್ಕರಿಸಿರುವ ಹೈಕೋರ್ಟ್, 8 ವಾರಗಳ ಒಳಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು 2022ರ ಫೆಬ್ರವರಿ 21 ಕ್ಕೆ ಮುಂದೂಡಿದೆ.
ಯುವ ಜನರ ಪ್ರೇರಣೆಯಾಗಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಫೋಟೋವನ್ನು ನೋಟುಗಳ ಮೇಲೆ ಮುದ್ರಿಸಲು ಕೋರುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಇಂಥದ್ದೇ ಅರ್ಜಿ ವಿಚಾರಣೆ ನಡೆಸಿದ್ದ ಕಲ್ಕತ್ತಾ ಹೈಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ, ನೋಟಿನ ಮೇಲೆ ಇತರೆ ರಾಷ್ಟ್ರೀಯ ನಾಯಕರ ಫೋಟೋ ಮುದ್ರಿಸಬಹುದಾದರೂ, ನೋಟಿನ ವಿನ್ಯಾಸ ಮತ್ತು ಫೋಟೋ ಬದಲಾವಣೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಮ್ಮತಿಯೂ ಮುಖ್ಯ ಎಂದಿತ್ತು. ಇನ್ನು, 2021ರ ಫೆಬ್ರವರಿ 4ರಂದು ಮದ್ರಾಸ್ ಹೈಕೋರ್ಟ್ ಇಂಥದ್ದೇ ಅರ್ಜಿ ಇತ್ಯರ್ಥಪಡಿಸಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ವಾತಂತ್ರ್ಯ ಹೋರಾಟವನ್ನು ನ್ಯಾಯಾಲಯ ಪರಿಗಣಿಸುತ್ತದೆ. ಆದರೆ ಅರ್ಜಿದಾರರ ಕೋರಿಕೆ ಪುರಸ್ಕರಿಸಿ ಪೋಟೋ ಮುದ್ರಿಸುವಂತೆ ಆದೇಶಿಸಲಾಗದು ಎಂದಿದೆ ಎಂದು ಲೀಗಲ್ ನ್ಯೂಸ್ ವರದಿ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….