ಬೆಂ.ಗ್ರಾ.ಜಿಲ್ಲೆ: ಯುವ ಸ್ಪಂದನ ಕಾರ್ಯಕ್ರಮದಡಿ ಶಾಲಾ-ಕಾಲೇಜುಗಳು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶ ಯುವಜನರಿಗೂ ಅರಿವು ಮೂಡಿಸಿ, ಅಗತ್ಯವಿರುವವರಿಗೆ ಸಮಾಲೋಚನೆ ನಡೆಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ “ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವಸ್ಪಂದನ ಯೋಜನೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಹಾಗೂ ಕರ್ನಾಟಕ ರಾಜ್ಯ ಯುವ ನೀತಿ 2021ರ ಅಭಿಪ್ರಾಯ ಸಂಗ್ರಹಣಾ ಸಭೆ”ಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷೆ ಎದುರಿಸುವ ಬಗ್ಗೆ, ಪಿಯುಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಹಾಗೂ ಉದ್ಯೋಗದ ಕುರಿತು ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಅಗತ್ಯ ಮಾಹಿತಿ ನೀಡಲು ತಿಳಿಸಿದರಲ್ಲದೆ, ಯುವ ಸ್ಪಂದನ ಯೋಜನೆಯಡಿ ಆಯೋಜಿಸಲಾಗುವ ಅರಿವು ಮೂಡಿಸುವ ಕಾರ್ಯಕ್ರಮಗಳ ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಪತ್ರಿಕೆ, ವೆಬ್‌ಸೈಟ್ ಹಾಗೂ ಮುಖಪುಟದಲ್ಲಿ ದಾಖಲಿಸುವ ಮೂಲಕ ಪ್ರಚುರಪಡಿಸುವಂತೆ ತಿಳಿಸಿದರು.
ಕಾರಾಣಾಂತರಗಳಿಂದ ಓದುವುದನ್ನು ಸ್ಥಗಿತಗೊಳಿಸಿರುವ, ವಿವಿಧ ವೃತ್ತಿಯಲ್ಲಿ ತೊಡಗಿರುವ ಯುವಜನತೆಯ ಮನೋಸ್ಥಿತಿಯನ್ನು ಸುಧಾರಿಸಿ, ಶಿಕ್ಷಣ ಮುಂದುವರೆಸಲು ಮನವೊಲಿಸುವ ಕೆಲಸ ಮಾಡಬೇಕು ಎಂದರು.
2012ರಲ್ಲಿ ಜಾರಿಗೆ ತಂದ ಯುವ ನೀತಿಯ ಪರಿಷ್ಕರಣೆ ಕುರಿತು ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರಾಜ್ಯ ಸಮಿತಿಗೆ ನೀಡಲಾಗುವ ವರದಿಯು ಹೆಚ್ಚು ರಚನಾತ್ಮಕವಾಗಿರಲಿ ಎಂದರಲ್ಲದೆ, ಯುವ ನೀತಿಯೊಂದಿಗೆ ಉತ್ತಮವಾದ ಅಂಶಗಳನ್ನು ಸೇರಿಸಿ, ಹೊಸ ರೂಪ ನೀಡಿ ಎಂದು ತಿಳಿಸಿದರು.
ಮಹಿಳೆಯರು, ವಿಕಲಚೇತನರು, ಲಿಂಗ ಅಲ್ಪಸಂಖ್ಯಾತರು, ಸವಾಲು ಎದುರಿಸಿದ ಯುವಜನರಿಗೂ ಸಹಕಾರವಾಗುವ ಅಂಶಗಳು ಹಾಗೂ ಉದ್ಯಮಗಳಲ್ಲಿ ಯುವಜನರು ಭಾಗವಹಿಸಲು ಸಹಕಾರವಾಗುವಂತಹ ನೀತಿಯನ್ನು ವರದಿ ಹೊಂದಿರಲಿ ಎಂದು ತಿಳಿಸಿದರು.
ಯುವ ನೀತಿ ಪರಿಷ್ಕರಣೆ ಕಾರ್ಯಕ್ಕಾಗಿ ಜಿಲ್ಲಾ ಮಟ್ಟದ ಶಿಫಾರಸ್ಸುಗಳ ವರದಿ ತಯಾರಿಕೆಗೆ ನಡೆಸಲಾಗುವ ಸಮೀಕ್ಷಾ ನಮೂನೆ ಕನ್ನಡ ಭಾಷೆಯಲ್ಲಿಯೂ ಇರಲಿ ಎಂದರಲ್ಲದೆ, ವರದಿಯು ಜಿಲ್ಲೆಯಲ್ಲಿನ ವಿವಿಧ ವೃತ್ತಿಯ ಯುವಜನರ ಅಭಿವೃದ್ಧಿಗೆ ಪೂರಕವಾಗಿರಲಿ ಹಾಗೂ ವಾಸ್ತವ ಅಂಶಗಳನ್ನು ಹೊಂದಿರಲಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಮಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಮಾನಸಿಕ ಅಧಿಕಾರಿ ಡಾ.ಶಾಂತಲಾ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಭವ್ಯ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ನಿಮ್ಹಾನ್ಸ್ ಸಂಯೋಜಕ ವಿರೂಪಾಕ್ಷ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಯುವ ಚಿಂತಕರಾದ ತಿಪ್ಪೇಸ್ವಾಮಿ ಹಾಗೂ ಚಿದಾನಂದ, ಯುವ ಸ್ಪಂದನ ಕಾರ್ಯಕ್ರಮಾಧಿಕಾರಿ ಸಲೀಂ, ಯುವ ಸಮಾಲೋಚಕರು, ಪರಿವರ್ತಕರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….