ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗ ಮಧ್ಯೆಯಿರುವ ಜಕ್ಕಲಮೊಡಗು ಕ್ರಾಸ್ ನ ಸೇತುವೆ ಬಳಿ ಯಾರೋ ಕಿಡಿಗೇಡಿಗಳು ಟ್ಯಾಂಕರ್ ನಲ್ಲಿ ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವ ಮೂಲಕ ಶ್ರೀನಿವಾಸ ಸಾಗರ ಜಲಾಶಯದ ನೀರಿಗೆ ಸೇರುವಂತೆ ಮಾಡಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಬುಧವಾರ ಪರಿಸರ, ಪೊಲೀಸ್, ಕಂದಾಯ ಮೀನುಗಾರಿಕೆ , ಸಣ್ಣ ನೀರಾವರಿ, ಅರಣ್ಯ, ಕೈಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಸದರಿ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸುವ ಮೂಲಕ ಮಾಹಿತಿ ಕಲೆ ಹಾಕಿತು.
ಈ ಸಂದರ್ಭದಲ್ಲಿ ಜಿಲ್ಲಾ ಪರಿಸರ ಅಧಿಕಾರಿ ಸಿದ್ಧೇಶ್ವರ ಬಾಬು ರವರು ಮಾತನಾಡಿ, ಜಕ್ಕಲಮಡುಗು ಕ್ರಾಸ್ ಹಾಗೂ ಶ್ರೀನಿವಾಸ್ ಸಾಗರದ ಬಳಿ ವಿಸರ್ಜಿಸಲಾಗಿರುವ ರಾಸಾಯನಿಕ ತ್ಯಾಜ್ಯ ನೀರು (ಜನರಲ್ ಪ್ಯಾರಾಮೀಟರ್, ಆಯಿಲ್ ಅಂಡ್ ಗ್ರೀಸ್, ಹೆವಿ ಮೆಟಲ್ ಮತ್ತು ಸೈನೈಡ್) ಮತ್ತು ಮಣ್ಣಿನ ಮಾದರಿ ಸಂಗ್ರಹಿಸಲಾಗಿರುತ್ತದೆ ಹಾಗೂ ಶ್ರೀನಿವಾಸ ಸಾಗರ ಜಲಾಶಯದ ನೀರನ್ನು ಸಹ ಸಂಗ್ರಹಿಸಲಾಗಿ ವಿಶ್ಲೇಷಣೆಗಾಗಿ ಬೆಂಗಳೂರಿನ ಕೇಂದ್ರ ಪರಿಸರ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಕೇಂದ್ರ ಪರಿಸರ ಪ್ರಯೋಗಾಲಯದ ಅಧಿಕಾರಿಗಳಿಗೆ ಶೀಘ್ರದಲ್ಲಿ ವಿಶ್ಲೇಷಣಾ ವರದಿಯನ್ನು ನೀಡುವಂತೆ ಕೋರಲಾಗಿರುತ್ತದೆ. ವಿಶ್ಲೇಷಣಾ ವರದಿ ಬಂದ ನಂತರ ವರದಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಂಡಳಿಯ ಕೇಂದ್ರ ಕಛೇರಿಗೆ ಸದರಿ ವಿಷಯದ ಬಗ್ಗೆ ವರದಿಯನ್ನು ಸಲ್ಲಿಸಿ ಮುಂದಿನ ಕ್ರಮವಹಿಸಲಾಗುವುದು ಎಂದರು.
ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಿ ಹೋಗಿರುವ ಕಿಡಿಗೇಡಿಗಳ ಪತ್ತೆಗಾಗಿ ಈಗಾಗಲೇ ಪೊಲೀಸ್ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಈ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದುಎಂದು ಪೊಲೀಸ್ ಉಪಾಧೀಕ್ಷಕ ವಾಸುದೇವ್ ಅವರು ತಿಳಿಸಿದರು.
ಇದೇ ವೇಳೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಾಧುರಿ ಮಾತನಾಡಿ, ಸದ್ಯಕ್ಕೆ ಶ್ರೀನಿವಾಸಸಾಗರ ಜಲಾಶಯದಲ್ಲಿ ಮೀನು ಹಿಡಿಯದಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಜೊತೆಗೆ ಈ ಕೆರೆಯ ನೀರು ಮತ್ತು ಮೀನನ್ನು ಪರೀಕ್ಷೆಗಾಗಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಸಂಶೋಧನಾ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲು ಕ್ರಮವಹಿಸಲಾಗಿದೆ ಎಂದರು.
ಪ್ರಯೋಗಾಲಯದ ವರದಿ ಬರುವವರೆಗೆ ಸುತ್ತಮುತ್ತಲ ಗ್ರಾಮಗಳ ಜನರು ತಮ್ಮ ಜಾನುವಾರುಗಳಿಗೂ ಸಹ ಈ ಕೆರೆಯ ನೀರನ್ನು ಕುಡಿಸದಂತೆ ಡಂಗೂರ ಸಾರುವ ಮೂಲಕ ಜಾಗೃತಿ ಮೂಡಿಸುವಂತೆ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರಿಗೆ ಸೂಚಿಸಲಾಗಿದೆ ಜೊತೆಗೆ ಜನರು ಕೂಡ ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸದಂತೆ ಚಿಕ್ಕಬಳ್ಳಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಂಟಿ ಸಮೀಕ್ಷೆಯಲ್ಲಿ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಶರೀಫ್, ತಹಸೀಲ್ದಾರ್ ಗಣಪತಿಶಾಸ್ತ್ರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ (ಎಚ್.ಎನ್ ವ್ಯಾಲಿ ಯೋಜನೆ)ಯ ಸಹಾಯಕ ಕಾರ್ಯಪಾಲಕ ಅಭಿಯಂತರ ರವೀಂದ್ರನಾಥ್, RFO ಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….