ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಜೊತೆಗೆ ಸಭೆ ನಡೆಸಿ ಅಂತಿಮ ನಿರ್ಧಾರ ಆಗುವವರೆಗೂ ಎಂಎಸ್ ಜಿಪಿ ಘಟಕಕ್ಕೆ ಕಸದ ಲಾರಿಗಳನ್ನು ಕಳುಹಿಸುವುದಿಲ್ಲ ಎಂಬ ಭರವಸೆ ಮೇರೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ರೈತರ ಕಣ್ಣು ತಪ್ಪಿಸಿ ಘಟಕದ ಲಾರಿಯೊಂದು ತ್ಯಾಜ್ಯ ಹೊತ್ತು ತಂದು ಕಾವಲಿನಲ್ಲಿದ್ದ ರೈತರ ಕೈಗೆ ಸಿಕ್ಕಿಬಿದ್ದಿದೆ.
ಲಾರಿಗಳನ್ನು ಕಳುಹಿಸುವುದಿಲ್ಲ ಎಂದು ಉಸ್ತುವಾರಿ ಸಚಿವರು ಭರವಸೆ ನೀಡಿದ ಕಾರಣಕ್ಕಾಗಿಯೇ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಆದಾಗ್ಯೂ ಸುತ್ತಮುತ್ತಲಿನ ಗ್ರಾಮಗಳ ರೈತರು ಪಾಳಿ ಪ್ರಕಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವೆಡೆ ಹಗಲು-ರಾತ್ರಿ ಕಾವಲು ಕಾಯುತ್ತಿದ್ದರು. ರೈತರ ಕಣ್ಣು ತಪ್ಪಿಸಿ ಎಂಎಸ್ ಜಿಪಿ ಲಾರಿಯೊಂದು ತ್ಯಾಜ್ಯ ತುಂಬಿಕೊಂಡು ಮೂಗೇನಹಳ್ಳಿ ಕ್ರಾಸ್ ಬಳಿ ಬಂದಾಗ ಕಾವಲಿನಲ್ಲಿದ್ದ ರೈತರು ಗಮನಿಸಿ ಕೂಡಲೇ ಲಾರಿಯನ್ನು ತಡೆದಿದ್ದಾರೆ.
ಕ್ಷಣಾರ್ಧದಲ್ಲೇ ಜಮಾಯಿಸಿದ ರೈತರು: ಇನ್ನು ತ್ಯಾಜ್ಯದ ಲಾರಿ ಬಂದಿರುವ ವಿಷಯ ತಿಳಿದ ಐವತ್ತಕ್ಕೂ ಹೆಚ್ಚು ಜನ ರೈತರು ಸ್ಥಳದಲ್ಲಿ ಜಮಾಯಿಸಿದ್ದರು.
ರೈತರ ಆಕ್ರೋಶ: ಲಾರಿ ಬಂದ ವಿಚಾರ ತಿಳಿದು ಸ್ಥಳದಲ್ಲಿ ಜಮಾಯಿಸಿದ ರೈತರು ಲಾರಿಗೆ ಬೆಂಕಿ ಹಚ್ಚುವ ಎಚ್ಚರಿಕೆ ನೀಡಿದರು. ನಂತರ ಸ್ಥಳಕ್ಕೆ ಬಂದ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಸಾರಥಿ ಸತ್ಯಪ್ರಕಾಶ್, ರೈತರನ್ನು ಸಮಾಧಾನಪಡಿಸಿ, ಲಾರಿಯನ್ನು ಮತ್ತೆ ಈ ಕಡೆ ಬರದಂತೆ ಎಚ್ಚರಿಕೆ ಕೊಟ್ಟು ವಾಪಸ್ ಮರಳುವಂತೆ ಸೂಚಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….