ದೊಡ್ಡಬಳ್ಳಾಪುರ: ಶುಕ್ರವಾರ ಸಂಜೆ ನಿಧನರಾದ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಅಂತ್ಯಕ್ರಿಯೆ ಕೊಡಿಗೇಹಳ್ಳಿ ರಸ್ತೆಯ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ನಲ್ಲಿ ಶನಿವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಜಾಲಪ್ಪರ ಹಿರಿಯ ಪುತ್ರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ನೆರವೇರಿಸಿದರು.
ಸರ್ಕಾರದ ಪರವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಗೌರವ ಸಮರ್ಪಸಿದರೆ. ಪೊಲೀಸ್ ಇಲಾಖೆ ಕುಶಾಲು ತೋಪು ಹಾರಿಸಿ ಗೌರವ ಅರ್ಪಿಸಿದರು.
ಕಾಲೇಜು ದಿನಗಳಲ್ಲಿ ಒಡನಾಡಿಯಾಗಿದ್ದ ಜಾಲಪ್ಪ ಅವರು ಸದಾ ಬಡವರು, ರೈತರ ಪರವಾಗಿ ಮಾತನಾಡುತ್ತಿದ್ದವರು. ಅಧಿಕಾರಕ್ಕೆ ಬಂದಾಗ ಬಡವರ ಪರವಾಗಿ ಕೆಲಸ ಮಾಡಿ ತೋರಿಸಿದರು ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಅವರು ಜಾಲಪ್ಪ ಅವರನ್ನು ಸ್ಮರಿಸಿದರು.
ಶನಿವಾರ ನಗರದಲ್ಲಿ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಅತ್ಯಂತ ಕಡುಬಡತನ ಹಾಗೂ ಹಿಂದುಳಿದ ವರ್ಗದ ಕುಟುಂಬದಿಂದ ಬಂದಿದ್ದ ಜಾಲಪ್ಪ ಅವರು ಕಾಲೇಜು ದಿನಗಳಲ್ಲಿ ಓದಿನ ವಿಚಾರದಲ್ಲಿ ಎಂದೂ ಉದಾಸೀನತೆ ತೋರಿದವರಲ್ಲ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಆಡಳಿತದಲ್ಲೂ ಒಂದು ದಿನವನ್ನು ವ್ಯರ್ಥಮಾಡದೆ ನಿಷ್ಠೆಯಿಂದ ಕೆಲಸ ಮಾಡಿದ ಮುತ್ಸದ್ದಿ ಆಡಳಿತಗಾರರಾಗಿದ್ದರು ಎಂದು ನೆನಪು ಮಾಡಿಕೊಂಡರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಾಲಪ್ಪ ಅವರ ಪಾರ್ಥಿವ ಶರೀರಿಕ್ಕೆ ಪುಷ್ಪನಮನ ಸಲ್ಲಿಸಿ, ಜಾಲಪ್ಪ ಅವರೊಂದಿಗಿನ ತಮ್ಮ ಒಡನಾಟವನ್ನು ನೆನೆದು ಭಾವುಕರಾದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ವರ್ಗವನ್ನು ಒಂದು ವೇದಿಕೆಗೆ ತರುವ ಮೂಲಕ ಸಾಮಾಜಿಕ ನ್ಯಾಯ ದೊರೆಯುವಂತೆ ಮಾಡಿದವರು ಜಾಲಪ್ಪ ಅವರು. ಅಹಿಂದಾ ವರ್ಗದವರು ಶಿಕ್ಷಣ ಪಡೆಯದ ಹೊರತು ಆರ್ಥಿಕ,ಸಾಮಾಜಿಕ ಸಮಾನತೆ ಕಷ್ಟವಾಗಲಿದೆ ಎನ್ನುವುದನ್ನು ಅರಿತು ಸಾಕಷ್ಟು ಕೆಲಸ ಮಾಡಿದ್ದರು. ಕೋಲಾರದಂತಹ ಹಿಂದುಳಿದ್ದಿ ಜಿಲ್ಲೆಯಲ್ಲಿ ಆಸ್ಪತ್ರೆ, ಕಾಲೇಜು ಆರಂಭಿಸುವ ಮೂಲಕ ಬಡವರಿಗು ಆರೋಗ್ಯ ಸೇವೆ ದೊರೆಯುವಂತೆ ಮಾಡಿದ್ದವರು. ರಾಜಕೀಯ ಹಾಗೂ ಕುಟುಂಬದ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….