ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮಾತಿನ ಸರಣಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ.
ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯರ ಮೇಲೆ ಮುಗಿಬಿದ್ದಿದ್ದು, ಸುಳ್ಳು ಹೇಳುವ ಚಾಳಿಗೆ ಚಿಕಿತ್ಸೆ ಇಲ್ಲ. ʼಸಿದ್ದಕಲೆʼಯ ನಿಷ್ಣಾತರಿಗೆ ಸುಳ್ಳೇ ದೇವರು, ಸುಳ್ಳೇ ಸರ್ವಸ್ವ. ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಸುಳ್ಳು ಹೇಳಿಕೊಂಡು ಓಡಾಡುವ ʼಗೊಬೆಲಪ್ಪʼನ ʼಬೂಸಿಭಜನೆʼ ಹೊಸದೇನೂ ಅಲ್ಲ. ರಾಜಕೀಯ ಜನ್ಮಕೊಟ್ಟ ಪಕ್ಷದ ಬಗ್ಗೆಯೇ ಹಗುರವಾಗಿ ಮಾತನಾಡುವ ʼಕೃತಘ್ನʼತೆಗೆ ಇದೇ ಸಾಕ್ಷಿ.
ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. ʼಬ್ರೂಟಸ್ ಮನಃಸ್ಥಿತಿʼ, ಸಂದರ್ಭಕ್ಕೆ ತಕ್ಕಂತೆ ʼಬಣ್ಣ ಬದಲಿಸುವ ಊಸರವಳ್ಳಿ ದುಸ್ಥಿತಿʼ. ಆಪರೇಷನ್ ಕಮಲದಲ್ಲಿ ಕುಮ್ಮಕ್ಕಾಗಿ ಮೈತ್ರಿ ಸರಕಾರ ಕೆಡವಿದ ಸಿದ್ದಶೂರನ ಸಾರಥ್ಯದಲ್ಲಿ ʼಆಪರೇಷನ್ ಹಸ್ತʼ ನಡೆಯುತ್ತಿದೆ ಎಂದು ತೀಕ್ಷಣ ಹಾಗೂ ಮಾರ್ಮಿಕ ಮಾತುಗಳಲ್ಲಿ ಸಿದ್ದರಾಮಯ್ಯರ ಹೆಸರೇಳದೆ ಕುಟುಕಿದ್ದಾರೆ.
ಜೆಡಿಎಸ್ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ನಮ್ಮ ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ʼಬ್ರೋಕರಪ್ಪʼನ ಕುತಂತ್ರಕ್ಕೆ ಹೆದರುವ ಪ್ರಶ್ನೆ ಇಲ್ಲ. ಹಿಂದೆ ದೇವರಾಜ ಅರಸು ಅವರಿಗೆ ನರಕಯಾತನೆ ನೀಡಿದ್ದ ಕಾಂಗ್ರೆಸ್, ಈಗ ʼಅಭಿನವ ಅರಸುʼ ಎಂದು ಪುಂಗಿ ಬಿಡುವ ʼಸುಳ್ಳುಸಿದ್ದಪ್ಪʼನಿಗೆ ಶರಣಾಗಿದೆ. ಈ ವ್ಯಕ್ತಿಗೆ ಅರಸು ಹೆಸರೇಳುವ ಅರ್ಹತೆಯೇ ಇಲ್ಲ.
ಜೆಡಿಎಸ್ ಮುಳುಗುವ ಪಕ್ಷವಾ? ತೇಲುವಾ ಪಕ್ಷವಾ? ಎನ್ನುವುದನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ನಾಡಿನ ಜನರೇ ತೋರಿಸುತ್ತಾರೆ. ಅಲ್ಲಿವರೆಗೆ ಸಿದ್ದಸೂತ್ರಧಾರನ ʼಆಪರೇಷನ್ ಹಸ್ತವೆಂಬ ಅಸಹ್ಯʼ ನಡೆಯಲಿ. ಅದಕ್ಕೆ ಎಷ್ಟೇ ʼಕೋನʼಗಳನ್ನು ಸೃಷ್ಟಿಸಿದರೂ ಜೆಡಿಎಸ್ ಜಗ್ಗುವುದಿಲ್ಲ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….