ದೊಡ್ಡಬಳ್ಳಾಪುರ: ಕೃಷಿ ಯಾಂತ್ರೀಕರಣ, ಬೆಂಬಲ ಬೆಲೆಯ ಖರೀದಿ ಮೊದಲಾಗಿ ರೈತರಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ರೈತರು ಇದರ ಸದುಪಯೋಗಪಡಿಸಿಕೊಂಡರೆ ವೃತ್ತಿಪರರು ಸಂಬಳ ಪಡೆಯುವುದಕ್ಕಿಂತ ಹೆಚ್ಚಾಗಿ, ಕೃಷಿಯಿಂದ ಲಾಭ ಪಡೆಯಬಹುದಾಗಿದೆ ಎಂದು ಕರ್ನಾಟಕ ರಾಜ್ಯ ತೆಂಗಿನ ನಾರು ಸಹಕಾರ ಮಹಾಮಂಡಲಿ ಅಧ್ಯಕ್ಷ ಎಸ್.ಎಲ್.ವೆಂಕಟೇಶ್ ಬಾಬು ತಿಳಿಸಿದರು.
ತಾಲೂಕಿನ ಮೆಳೇಕೋಟೆಯಲ್ಲಿ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ನಡೆದ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎರಡು ಎಕರೆ ಭೂಮಿ ಹೊಂದಿರುವ ರೈತರು ಸಮಗ್ರ ಕೃಷಿ ಪದ್ದತಿ ಅನುಸರಿಸಿದರೆ ಆರ್ಥಕವಾಗಿ ಸದೃಢರಾಗಬಹುದು. ಇದರೊಂದಿಗೆ ಪುಷ್ಪೋದ್ಯಮಕ್ಕೂ ಸಹ ಸರ್ಕಾರ ಸಹಾಯಧನ ನೀಡುತ್ತಿದ್ದು, ಹೆಚ್ಚಿನ ಜಮೀನು ಹೊಂದಿರುವವರು ಪುಷ್ಪೋದ್ಯಮ ಮಾಡಬಹುದು. ಹನಿ ನೀರಾವರಿ, ಕೃಷಿಯಲ್ಲಿ ಆಧುನಿಕ ಪದ್ದತಿಗಳನ್ನು ರೈತರು ಅಳವಡಿಸಿಕೊಳ್ಳಬೇಕಿದೆ ಎಂದ ಅವರು ತೆಂಗಿನ ನಾರಿಗೂ ಸಹ ಹೆಚ್ಚು ಬೇಡಿಕೆ ಇದ್ದು, ರೈತರು ಇದನ್ನು ನಾಶ ಪಡಿಸದೇ, ಕೊಳ್ಳುವವರಿಗೆ ನೀಡಬೇಕಿದೆ. ತೆಂಗಿನಿಂದ 150 ರೀತಿಯ ಉತ್ಪನ್ನಗಳನ್ನು ಮಾಡಲಾಗುತ್ತಿದೆ ಎಂದರು.
ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಇಂದು ರೈತರ ಸ್ಥಿತಿಗತಿಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ರೈತರ ಆದಾಯ ದ್ವಿಗುಣ ಎನ್ನುವುದು ಬರೀ ಮಾತಿಗೆ ಸೀಮಿತವಾಗಿದೆ. ಕೃಷಿಯನ್ನು ಬಹುರಾಷ್ಟ್ರೀಯ ಕಂಪನಿಗಳ ವಶಕ್ಕೆ ಒಪ್ಪಿಸುವ ಬದಲಾಗಿ ಸ್ಥಳೀಯವಾಗಿ ಸ್ವದೇಶಿ ಕಂಪನಿಗಳ ಮೂಲಕ ಐತರಿಗೆ ನೆರವಾಗಬೇಕಿದೆ. ಈ ದಿಸೆಯಲ್ಲಿ ಹಾಡೋನಹಳ್ಳಿ ಅರ್ಕಾವತಿ ರೈತ ಉತ್ಪಾದಕ ಕಂಪನಿ ರೈತರಿಗೆ ವಿವಿಧ ಸೌಲಭ್ಯಗಳನ್ನು ನೀಡುವಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.
ಪ್ರಗತಿಪರ ಕೃಷಿಕ ಕೃಷ್ಣಮೂರ್ತಿ ಮಾತನಾಡಿ, ಆಧುನಿಕತೆ ಅಳವಡಿಸಿಕೊಂಡು ಕೃಷಿ ಪದ್ದತಿ ನಡೆಸಿದಲ್ಲಿ ಯಾವ ರೈತರಿಗೂ ನಷ್ಟ ಉಂಟಾಗುವುದಿಲ್ಲ. ಅದರಲ್ಲಿಯು ಸಮಗ್ರ ಕೃಷಿ ಪದ್ದತಿ ರೈತನಿಗೆ ವರದಾನವಾಗಿದೆ ಎಂದರು.
ಸಮಾರಂಭದಲ್ಲಿ ಪ್ರಗತಿಪರ ರೈತರಿಗೆ ಕೃಷಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಹಿಂಗಾರು ಬೆಳೆ ಸಮೀಕ್ಷೆ ಕುರಿತ ಪೋಷ್ಟರ್ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಆಂಜನ ಗೌಡ, ಮೆಳೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೀತಿ.ಎಸ್ ಗೌರೀಶ್, ಉಪಾಧ್ಯಕ್ಷ ಮುನಿರಾಜು, ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ ಎನ್.ಸುಶೀಲಮ್ಮ, ತಾಂತ್ರಿಕ ವಿಭಾಗದ ಅಧಿಕಾರಿ ರೂಪ, ಮಧುರೆ ಹೋಬಳಿ ಕೃಷಿ ಅಧಿಕಾರಿ ಹರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹಯ್ಯ, ಮುಖಂಡರಾದ ಜಯರಾಮಯ್ಯ, ರಾಜ್‍ಕುಮಾರ್, ಪ್ರಗತಿಪರ ರೈತ ಭಾಸ್ಕರ್ ಸೇರಿದಂತೆ ಮೆಳೇಕೋಟೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕೃಷಿಕ ಸಮಾಜದ ಸದಸ್ಯರು, ರೈತರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….