ಕಲಬುರಗಿ: 2022ರ ಜನವರಿ 3 ಮತ್ತು 4ರಂದು ಕಲಬುರಗಿಯ ಬಸರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಪತ್ರಕರ್ತರ 36ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಯಲಿದೆ. ಎರಡುವರೆ ದಶಕದ ನಂತರ ನಡೆಯುತ್ತಿರುವ ಈ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ನಡೆದಿದೆ.
ಶನಿವಾರ ರಾತ್ರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಗಂಗರಾಜ ಶಿರವಾರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಸಮ್ಮೇಳನಕ್ಕೆ ತೆರಳಿದರು.
ಸಮ್ಮೇಳನದ ಅಂಗವಾಗಿ ಜ.3ರಂದು ಮಧ್ಯಾಹ್ನ 1.30ಕ್ಕೆ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ. ನಂತರ 5 ಗಂಟೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಸಾಧಕರ ಗೌರವಿಸುವ ಬ್ರ್ಯಾಂಡ್ ಕಲಬುರಗಿ ಕಾರ್ಯಕ್ರಮ ನಡೆಯಲಿದೆ. ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅತಿಥಿಗಳಾಗಿ ಪಾಲ್ಗೊಳ್ಳವರು. ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಎರಡನೇ ದಿನ ಜ.4ರಂದು ಬೆಳಿಗ್ಗೆ 9.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸಲಿದ್ದು, ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಚಿವ ಮುರುಗೇಶ ನಿರಾಣಿ ವಸ್ತುಪ್ರದರ್ಶನ ಉದ್ಘಾಟಿಸುವರು. ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ ಡಾ.ಅಜಯಸಿಂಗ್, ಸಂಸದ ಡಾ.ಉಮೇಶ ಜಾಧವ ವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಅದೇ ದಿನ ಮಧ್ಯಾಹ್ನ 12.30ಕ್ಕೆ ಡಿಜಿಟಲ್ ಮಾಧ್ಯಮ ಸ್ಥಿತ್ಯಂತರ ಕುರಿತು ಗೋಷ್ಠಿ- 1, ಮಧ್ಯಾಹ್ನ 2ಕ್ಕೆ ಮಾಧ್ಯಮ ಮತ್ತು ಸರ್ಕಾರ ಸವಾಲುಗಳು-2ನೇ ಗೋಷ್ಠಿ, ಸಂಜೆ 4 ಗಂಟೆಗೆ ಮಹಿಳೆ ಮತ್ತು ಸವಾಲುಗಳು-3ನೇ ಗೋಷ್ಠಿ ನಡೆಯಲಿದೆ. ಸಮ್ಮೇಳನದಲ್ಲಿ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ನಡೆಯಲಿದೆ.
ಸಂಜೆ 5 ಗಂಟೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ದಿಕ್ಸೂಚಿ ಭಾಷಣ ಮಾಡುವರು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಕಾರ್ಜುನ ಖರ್ಗೆ ಅಭಿನಂದನಾ ನುಡಿಗಳನ್ನಾಡುವರು. ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಮುರುಗೇಶ ನಿರಾಣಿ, ಶಿವರಾಮ ಹೆಬ್ಬಾರ, ಸಿ.ಎನ್.ಅಶ್ವಥನಾರಾಯಣ, ಗೋವಿಂದಯ್ಯ ಮೊದಲಾದವರು ಪಾಲ್ಗೊಳ್ಳುವರು. ಪತ್ರತಕರ್ತರಾದ ರವಿ ಹೆಗಡೆ ಸಮಾರೋಪ ಭಾಷಣ ಮಾಡಲಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….