ಬೆಂಗಳೂರು: ಸರ್ಕಾರ ಜಾರಿಗೆ ತಂದಿರುವ ನಿರ್ಬಂಧ ನಿಯಮ ಕೋವಿಡ್ ನಿಯಂತ್ರಣಕ್ಕೆ ತಂದಿರುವ ನಿರ್ಬಂಧ ಅಥವಾ ಸೆಮಿ ಲಾಕ್ ಡೌನ್ ಅಲ್ಲ ಅಥವಾ ಕೋವಿಡ್ ಲಾಕ್ ಡೌನ್ ಅಲ್ಲ, ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್ ಡೌನ್. ಬಿಜೆಪಿಯವರಿಗೆ ಇತ್ತೀಚೆಗೆ ರಾಜಕಾರಣ ಕಠಿಣವಾಗುತ್ತಿದೆ. ಜನರು ಕಠಿಣ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ನಮ್ಮನ್ನು ಎದುರಿಸಲಾಗದೆ ತಂದಿರುವ ಬಿಜೆಪಿ ನಿಯಮ, ಬಿಜೆಪಿ ಲಾಕ್ ಡೌನ್ ಅಷ್ಟೆ, ಇಲ್ಲಿ ಬಿಜೆಪಿಯ ಸ್ವಹಿತಾಸಕ್ತಿ ಎದ್ದು ಕಾಣುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದು, ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿರುವ ಬಗ್ಗೆ ಸುದ್ದಿಗಾರರು ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೇಳಿದಾಗ ಡಿ ಕೆ ಶಿವಕುಮಾರ್ ಈ ರೀತಿ ಉತ್ತರಿಸಿದ್ದಾರೆ.
ಬಿಜೆಪಿಯವರು ತಮಗೆ ಬೇಕಂತೆ ನಿಯಮಗಳನ್ನು ಅಧಿಕಾರಿಗಳ ಕೈಯಲ್ಲಿ ಬರೆಸಿದ್ದಾರೆ. ದಿನಕ್ಕೆ ಎರಡರಿಂದ ಮೂರು ಸಾವಿರ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಿದ್ದಾರೆ, ಯಾರ್ಯಾರಿಗೆ ಎಲ್ಲೆಲ್ಲಿ ಸೋಂಕು ಬಂದಿದೆ ಎಂದು ತೋರಿಸಿದರೆ ನಾವು ಹೋಗಿ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.
ನಮಗೆ ರ್ಯಾಲಿ, ಪ್ರತಿಭಟನೆ ಮಾಡಬೇಡಿ ಎಂದು ಸರ್ಕಾರದ ಸಚಿವರುಗಳು ಹೇಳಿದ್ದಾರೆ, ನಾವು ರ್ಯಾಲಿ, ಪ್ರತಿಭಟನೆ ಮಾಡುತ್ತಿಲ್ಲ, ಜನರಿಗೆ ನೀರಿಗಾಗಿ ನಡೆಯುತ್ತೇವೆ. ಜ.9ರಿಂದ ನಾವು ಮಾಡುತ್ತಿರುವುದು ನೀರಿಗಾಗಿ ನಡಿಗೆ, ಜನರ ಹಿತಕ್ಕೋಸ್ಕರ, ನಾಡಿಗಾಗಿ, ಜನರ ಧ್ವನಿಯಾಗಿ ಬೆಂಗಳೂರಿನ ನಾಗರಿಕರಿಗೆ ಉತ್ತಮ ಆರೋಗ್ಯಯುತ ನೀರು ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೇವೆ. ಇದರಲ್ಲಿ ರಾಜಕೀಯವಿಲ್ಲ, ನಮ್ಮದು ಯಾತ್ರೆಯಲ್ಲ, ನೀರಿಗೋಸ್ಕರ ನಡಿಗೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ನಮಗೆ ನಿರ್ಬಂಧ ಹೇರಿ ನೊಟೀಸ್ ನೀಡಿದೆ, ನಾವು ಧರಣಿ ಏನೂ ಮಾಡುತ್ತಿಲ್ಲ, ಕಾವೇರಿ ನೀರು ಬೆಂಗಳೂರು ಜನಕ್ಕೆ ಕುಡಿಸುವುದು ನಮ್ಮ ಆಸೆ ಎಂದರು. ನಮ್ಮ ಪಾದಯಾತ್ರೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ನಡೆಸಿಯೇ ಸಿದ್ದ ಎಂದರು.(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….