ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರಿನ ಕೆರೆಗೆ ನಗರದ ಒಳಚರಂಡಿ ತ್ಯಾಜ್ಯ ನೀರು ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರು ಸೇರಿ ಕೆರೆನೀರು ಕಲುಷಿತವಾಗಿದ್ದು, ರಾಸಾಯನಿಕಯುಕ್ತ ನೀರು ಕಾರಣವಾಗಿರುವುದು ಪ್ರಯೋಗಾಲಯದಲ್ಲಿ ದೃಢಪಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆರೆ ನೀರು ಕಲುಷಿತವಾಗಲು ದೊಡ್ಡಬಳ್ಳಾಪುರ ನಗರಸಭೆ ಒಳಚರಂಡಿ ನೀರು ಕಾರಣ ಎಂದು ದೊಡ್ಡತುಮಕೂರು ಸುತ್ತಮುತ್ತಲಿನ ಗ್ರಾಮಸ್ಥರು ಹೋರಾಟಕ್ಕೆ ಸಿದ್ದರಾಗುತ್ತಿರುವ ಕುರಿತು, ಗುರುವಾರ ನಗರಸಭೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ದೌಡಾಯಿಸಿದ ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮಿನಾರಾಯಣ್, ಉಪಾಧ್ಯಕ್ಷೆ ಫರ್ಹಾನತಾಜ್ ಚಿಕ್ಕತುಮಕೂರು ಬಳಿ ಇರುವ ನಗರಸಭೆ ವ್ಯಾಪ್ತಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಶುದ್ದೀಕರಣ ವಿಧಾನದಲ್ಲಿ ಯಾವುದೇ ಲೋಪವಿಲ್ಲವೆಂದು ಕ್ಲೀನ್ ಚೀಟ್ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ನಗರಸಭೆ ಎಇಇ ಶೇಖ್ ಫಿರೋಜ್, ಕಿರಿಯ ಅಭಿಯಂತರ ಚಂದ್ರಶೇಖರ್, ತ್ಯಾಜ್ಯ ನೀರು ಶುದ್ಧೀಕರಿಸುವ ವಿಧಾನವನ್ನು ವಿವರಿಸಿ, ಇಲ್ಲಿನ ಶುದ್ಧಿಕರಣ ಘಟಕದಲ್ಲಿ 6 ಹಂತದಲ್ಲಿ ಯಾವುದೇ ಯಂತ್ರದ ಸಹಾಯ ಇಲ್ಲದೆ ನೈಸರ್ಗಿಕವಾಗಿ ಶುದ್ಧೀಕರಿಸಿ ಕೆರೆಗೆ ಬಿಡಲಾಗುತ್ತಿದೆ. ನಗರದ ಒಳಚರಂಡಿ ನಾವು ವಿಷಯುಕ್ತ ನೀರನ್ನು ಆಚೆ ಬಿಡುತ್ತಿಲ್ಲ. ಕೆರೆ ವಿಷಯುಕ್ತವಾಗಲು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನೀರು ಕಾರಣವಾಗಿರಬಹುದು. ಈ ಹಿಂದೆ ರಸ್ತೆ ಕಾಮಗಾರಿ ನಡೆಯುತ್ತಿದ್ದಾಗ ನೀರಿನ ಪೈಪ್ ಒಡೆದು ಹೋಗಿದ್ದರಿಂದ ಕೆಲಕಾಲ ಶುದ್ದೀಕರಣಕ್ಕೆ ತೊಂದರೆಯಾಗಿತ್ತು. ಈ ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದು, ಒಂದು ಪಂಪ್ ಮೋಟಾರ್ ಸಹ ಹೆಚ್ಚುವರಿ ಇದೆ. ಇಲ್ಲಿನ ಶುದ್ದಿಕರಿಸಿದ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ನಮ್ಮದು ಲೋಪವಿದ್ದರೆ ಸರಿಪಡಿಸಿಕೊಳ್ಳಲಾಗುವುದು ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ನಗರಸಭೆ ತ್ಯಾಜ್ಯ ನೀರು ಶುದ್ಧಿಕರಣ ಘಟಕದಿಂದ ವಿಷಯುಕ್ತ ನೀರು ಕೆರೆಗಳಿಗೆ ಹೋಗುತ್ತಿಲ್ಲ. ಇಲ್ಲಿನ ಕೆರೆಗಳ ನೀರು ವಿಷಯುಕ್ತವಾಗಲು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಿಂದ ಹಾಗು ಕೈಗಾರಿಕೆಗಳು ಶುದ್ದೀಕರಿಸದೆ ನೇರವಾಗಿ ಕೆರೆಗೆ ಬಿಡುತ್ತಿರುವುದೇ ಕಾರಣ ಹೊರತು ನಗರಸಭೆಯದಲ್ಲ ಎಂದು ತಿಳಿಸಿದ್ದಾರೆ.
ನಗರದ ಒಂದುವರೆ ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇದ್ದು, ಅಲ್ಲಿನ ಒಳಚರಂಡಿ ವ್ಯವಸ್ಥೆ ಮೂಲಕ ಅವೈಜ್ಞಾನಿಕವಾಗಿ ಶುದ್ಧಿಕರಿಸಿ ಚಿಕ್ಕತುಮಕೂರು ಕರೆ ತುಂಬಿ ಕೋಡಿ ಹೋಗುವ ಮೂಲಕ ದೊಡ್ಡತುಮಕೂರು ಕೆರೆ ಸೇರುತ್ತಿದೆ. ಇದರೊಂದಿಗೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಯುಕ್ತ ನೀರು ಸಹ ಸೇರುತ್ತಿದೆ.
ಶುದ್ಧವಾದ ನೀರನ್ನು ಉಳಿಸಿ: 20 ವರ್ಷಗಳ ನಂತರ ಕೆರೆ ತುಂಬಿರುವ ಖುಷಿ ನಮಗೆ ಜೀವಂತವಾಗಿಲ್ಲ. ಇಲ್ಲಿನ ನೀರನ್ನು ಜನ ಜಾನುವಾರುಗಳ ಬಳಸದ ಹಾಗೆ ಹಾಗಿದೆ. ಅಂತರರ್ಜಲವೂ ವಿಷಯುಕ್ತವಾಗುತ್ತಿದೆ. ಹೀಗಾಗಿ ನಮಗೆ ನಗರಸಭೆಯ ಈ ವಿಧಾನದಿಂದ ಶುದ್ಧಿಕರಿಸಿದ ನೀರು ನಮಗೆ ಬೇಡ, ಬಾಶೆಟ್ಟಿಹಳ್ಳಿ ವಿಷಯುಕ್ತ ನೀರು ಸಹ ಬೇಡ. ನಮಗೆ ಶುದ್ಧವಾದ ನೀರನ್ನು ಉಳಿಸಿ. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ದೊಡ್ಡತುಮಕೂರು ಗ್ರಾಮಸ್ಥರಾದ ಟಿ..ಆನಂದ್‍ಕುಮಾರ್, ಟಿ.ಜಿ.ಮಂಜುನಾಥ್, ಎಸ್.ಎಸ್.ಟಿ ಮಂಜುನಾಥ್, ನಾಗರಾಜುಬಾಬು, ಸಿ.ರಾಮಕೃಷ್ಣ ಮತ್ತಿತರರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….