ದೊಡ್ಡಬಳ್ಳಾಪುರ: ಕರೊನಾ ಆತಂಕ, ವಾರಾಂತ್ಯದ ಕಪ್ರ್ಯೂ ಹೇರಿಕೆ ಹಾಗೂ ನಿಷೇಧಾಜ್ಞೆಗಳ ನಡುವೆಯೇ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ತಾಲೂಕಿನಾದ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.
ಜನತೆ ಎಳ್ಳು ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂಕ್ರಾಂತಿ ಶುಭಾಶಯಗಳನ್ನು ಕೋರಿದರು. ಮನೆಗಳ ಮುಂದೆ ಸಂಕ್ರಾಂತಿಯ ವಿಶೇಷ ಶುಭಾಶಯಗಳನ್ನು ಕೋರುವ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರವು ಹಬ್ಬಕ್ಕೆ ಮೆರುಗು ನೀಡಿದ್ದವು.
ಕಬ್ಬು, ಅವರೇ ಕಾಯಿ, ಕಡಲೇಕಾಯಿಗಳನ್ನು ಗೋವುಗಳಿಗೆ ನೇವೇದ್ಯ ಮಾಡಿ ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರೈತರು ಮುಂಜಾನೆಯಿಂದಲೇ ರಾಸುಗಳಿಗೆ ಮೈ ತೊಳೆದು, ಕೊಂಬುಗಳಿಗೆ ಬಣ್ಣಗಳನ್ನು ಬಳಿದು ಅಲಂಕಾರ ಮಾಡುತ್ತಿದ್ದರು. ತಾಲೂಕಿನ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಗಳು ನಡೆದವು.
ಸಂಕ್ರಾಂತಿ ಹಬ್ಬ ದಿನವು ಸಹ ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ಅವರೆ ಕಾಯಿ, ಕಡಲೆ ಕಾಯಿ, ಕಬ್ಬು, ಗೆಣಸು ಮುಂತಾದ ಪದಾರ್ಥಗಳ ಮಾರಾಟ ಸಹ ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಂಜೆಯ ಕಾರ್ಯಕ್ರಮಗಳು: ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮೀಣ ಪ್ರದೇಶದಲ್ಲಿ ಕಾಟಿಮರಾಯನ ಹಬ್ಬದ ಆಚರಣೆ ನಡೆದಿದೆ. ರಾಸುಗಳಿಗೆ ಮೈ ತೊಳೆದು, ಕೊಂಬುಗಳಿಗೆ ಬಣ್ಣಗಳನ್ನು ಬಳಿದು, ಬಗೆ ಬಗೆಯ ಅಲಂಕಾರದಿಂದ ಕೂಡಿದ ಗೌನುಗಳನ್ನು ಹೊದಿಸಿ ಕೊರಳಿಗೆ ಗೆಜ್ಜೆ ಸಾರಗಳನ್ನು ಹೂವಿನ ಹಾರಗಳನ್ನು ಹಾಕಿ ವಾದ್ಯಗಳೊಂದಿಗೆ ಮರೆವಣಿಗೆ ಮಾಡಿದರು.
ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿಸುವ, ಕಿಚ್ಚು ಹಾಯಿಸುವ ಅಚರಣೆಗಳು ಎಲ್ಲೆಡೆ ಕಂಡು ಬಂದವು. ರಾಸುಗಳಿಗೆ ಅಲಂಕಾರ ಮಾಡಿಕೊಂಡು ಮೆರವಣಿಗೆಯಲ್ಲಿ ಊರ ಹೊರಗಿರುವ ಕಾಟಿಮರಾಯನ ಗೋಪುರ ಬಳಿಗೆ ಕರೆ ತಂದು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಣ್ಣಿನಿಂದ ಮಾಡಲ್ಪಟ್ಟ ಎತ್ತರ ಗೋಪುರಕ್ಕೆ ಸುಣ್ಣ ಮತ್ತು ಕೆಮ್ಮಣ್ಣಿನ ಪಟ್ಟೆಗಳನ್ನು ಬಳಿದು, ಹೂವು, ಮಾವು ಮತ್ತು ಬಾಳೆಯಿಂದ ಅಲಂಕಾರ ಮಾಡಿದ್ದರು. ಕೆಲವು ಗ್ರಾಮಗಳಲ್ಲಿ ಅಂಚಿ ಕಡ್ಡಿಗಳನ್ನು ಪೋಣಿಸಿರುವುದು ಸಹ ಕಂಡು ಬಂತು.
ಪ್ರತಿ ಮನೆಯಿಂದ ಅಕ್ಕಿ, ಕಾಳು, ಬೆಲ್ಲ ಸಂಗ್ರಹಿಸಿ ಅವುಗಳನ್ನು ಬೇಯಿಸಿ ಪ್ರಸಾದವನ್ನು ರಾಸುಗಳಿಗೆ ನೀಡುತ್ತಿದ್ದರು. ಕಾಟೀಮರಾಯನ ಗುಡಿಯಲ್ಲಿ ವಿಶೇಷ ಪೂಜೆ ನಡೆದ ನಂತರ ಊರಿನ ಕಡೆಗೆ ರಾಸುಗಳನ್ನು ಓಡಿಸಿಕೊಂಡು ಬಂದು ಕಿಚ್ಚು ಹಾಯಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….