ದೊಡ್ಡಬಳ್ಳಾಪುರ: ಕೇಂದ್ರದ ಮಾಜಿ ಸಚಿವ ದಿ.ಆರ್.ಎಲ್.ಜಾಲಪ್ಪ ಒಡೆತನ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಜಾಲಪ್ಪರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜಿ.ಎಚ್.ನಾಗರಾಜ್ ಅವರನ್ನು, ಉಪಾಧ್ಯಕ್ಷ ಸ್ಥಾನಕ್ಕೆ ಜೆ.ರಾಜೇಂದ್ರ ಅವರನ್ನು ಕಾರ್ಯದರ್ಶಿ ಸ್ಥಾನಕ್ಕೆ ಕೆ.ಜಿ.ಹನುಮಂತರಾಜು ರವರನ್ನು ಆಯ್ಕೆ ಮಾಡಲಾಗಿದೆ.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಬುಧವಾರ ನಗರದ ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆ ಆವರಣದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಜಿ.ಎಚ್.ನಾಗರಾಜ್, ದಿ.ಆರ್.ಎಲ್.ಜಾಲಪ್ಪ ಅವರು ಕಂಡ ಕನಸನ್ನು ನನಸಾಗಿಸುವ ಜವಾಬ್ದಾರಿ ಈಗ ನಮ್ಮ ಹೆಗಲ ಮೇಲೆ ಇದೆ. ಗ್ರಾಮೀಣ ಮಕ್ಕಳು ನಮ್ಮ ಶಾಲೆಯ ಎಲ್ಲಾ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಸಂಸ್ಥೆಗೆ ಕೀರ್ತಿ ತರುವ ಸಾಧನೆ ಮಾಡಬೇಕು. ಇದಕ್ಕೆ ಮುಖ್ಯ ರುವಾರಿಗಳು ಶಿಕ್ಷಕರಾಗಿದ್ದು ಇಂದಿನ ಮಕ್ಕಳು ಭವಿಷ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರನ್ನು ಪ್ರೇರೇಪಿಸಿ ಅಣಿಗೊಳಿಸಬೇಕು ಎಂದರು.
ಉಪಾಧ್ಯಕ್ಷರಾದ ಜೆ.ರಾಜೇಂದ್ರ ಮಾತನಾಡಿ, ನಮ್ಮ ತಂದೆ ಆರ್.ಎಲ್.ಜಾಲಪ್ಪ ಅವರ ಇಚ್ಚೆಯಾದ ಮೆಡಿಕಲ್ ಕಾಲೇಜ್ ನ್ನು ದೊಡ್ಡಬಳ್ಳಾಪುರದಲ್ಲಿ ಸ್ಥಾಪಿಸಲು ಜಿ.ಎಚ್.ನಾಗರಾಜ್ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
ನೂತನ ಕಾರ್ಯದರ್ಶಿ ಕೆ.ಜಿ ಹನುಮಂತರಾಜು ಅವರು ಮಾತನಾಡಿ, ವಿದ್ಯಾರ್ಥಿಗಳು ಕಷ್ಟ ಪಟ್ಟು ಓದದೇ, ಇಷ್ಟಪಟ್ಟು ಓದಿದಲ್ಲಿ ಅದೇ ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ದೇವರಾಜ್ ಅರಸ್ ಅಂತರರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಧನಂಜಯ್, ವ್ಯವಸ್ಥಾಪಕ ರವಿಕುಮಾರ್, ಎಇಇ ರಮೇಶ್, ವಿಶ್ವನಾಥ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….