ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ನೀಡುವ ಕೋವಿಡ್ 19 ರ ಮೊದಲ ಡೋಸ್ ಲಸಿಕಾಕರಣದಲ್ಲಿ ಶೇ.100 ರಷ್ಟು ಪ್ರಗತಿಯನ್ನು ಈಗಾಗಲೇ ಸಾಧಿಸಲಾಗಿದೆ. ಎರಡನೇ ಡೋಸ್ ನ ಲಸಿಕಾಕರಣದಲ್ಲಿ ನಿಗದಿತ ಗುರಿಯಂತೆ ಶೇ 91.4ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯ ಮಟ್ಟದ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಸ್ತುತ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿ, ಈ ಸಾಧನೆ ಗೈಯಲು ಸಹಕಾರ ನೀಡಿದ ಜಿಲ್ಲೆಯ ಜನರಿಗೆ ಧನ್ಯವಾದ ತಿಳಿಸಿದರು.
ಅವರು ಈ ಕುರಿತು ಬುಧವಾರ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆಗೊಳಿಸಿ ಮಾತನಾಡುತ್ತಾ, ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ 18 ವರ್ಷ ಮೇಲ್ಪಟ್ಟವರೆಲ್ಲರಿಗೆ ಲಸಿಕಾಕರಣ ಮಾಡಲು ಜಿಲ್ಲಾಡಳಿತ ಕಳೆದ ವರ್ಷದ ಜನವರಿ 16 ರಿಂದ ಲಸಿಕಾಕರಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಈವರೆಗೆ ಹಲವು ಬಾರಿ ಜಿಲ್ಲೆಯಾದ್ಯಂತ ಲಸಿಕಾ ಅಭಿಯಾನ, ಮೇಳ, ಉತ್ಸವ ಕಾರ್ಯಕ್ರಮಗಳನ್ನು ಸಮರೋಪಾಧಿಯಾಗಿ ಹಮ್ಮಿಕೊಳ್ಳುತ್ತಾ ಬಂದಿದ್ದು, ಪ್ರಸ್ತುತವು ಸಹ ಲಸಿಕಾಕರಣ ಕಾರ್ಯವನ್ನು ಭರದಿಂದ ನಡೆಸಲಾಗುತ್ತಿದೆ. ಜಿಲ್ಲಾಡಳಿತದ ಈ ಎಲ್ಲಾ ಕ್ರಮಗಳ ಫಲವಾಗಿ ಮೊದಲನೇ ಡೋಸ್ ಲಸಿಕೆಯನ್ನು 10,19,983 ಜನರಿಗೆ ಹಾಕುವ ಮೂಲಕ ಶೇ.100 ರಷ್ಟು ಪ್ರಗತಿಯನ್ನು ಈಗಾಗಲೇ ಸಾಧಿಸಲಾಗಿದೆ ಎಂದರು.
ಒಂದೆರೆಡು ದಿನಗಳಲ್ಲಿ ಪೂರ್ಣಗೊಳಿಸಿ: ಜಿಲ್ಲೆಯಲ್ಲಿ ಈವರೆಗೆ ಎರಡನೇ ಡೋಸ್ ಲಸಿಕೆಯನ್ನು ಪಡೆಯಲು 8,84,568 ಜನರು ಅರ್ಹರಾಗಿದ್ದು, ಈ ಪೈಕಿ 8,69,255 ಜನರಿಗೆ ಈಗಾಗಲೇ ಲಸಿಕೆಯನ್ನು ನೀಡುವ ಮೂಲಕ ಶೇ 98.26 ರಷ್ಟು ಪ್ರಗತಿಯನ್ನು (ಜನವರಿ 19ಕ್ಕೆ) ಸಾಧಿಸಲಾಗಿದೆ. ಮೊದಲನೇ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಲಸಿಕೆ ಪಡೆಯಲು ಜನವರಿ 19ಕ್ಕೆ ಜಿಲ್ಲೆಯಲ್ಲಿ 15,313 ಜನರು ಬಾಕಿ ಇದ್ದಾರೆ. ಇವರೆಲ್ಲರಿಗೂ ಒಂದೆರೆಡು ದಿನಗಳಲ್ಲಿ ಲಸಿಕಾಕರಣ ಮಾಡಿ ಪೂರ್ಣಗೊಳಿಸುವಂತೆ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯಲು ಮುಂದಿನ ದಿನಗಳಲ್ಲಿ ಅರ್ಹರಾಗುವವರಿಗೆ ಲಭ್ಯವಾಗುವ ದಿನಾಂಕದಂದೆ ಲಸಿಕೆ ನೀಡಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದರು.
ಸಹಕಾರಕ್ಕೆ ಕೃತಜ್ಞತೆ: ಎರಡನೇ ಡೋಸ್ ಲಸಿಕೆ ನೀಡಿಕೆಯಲ್ಲಿ ನಿಗದಿತ ಗುರಿಯನ್ನು ಸಾಧಿಸಿ ಶೇ.91.4ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯ ಮಟ್ಟದ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಎರಡನೇ ಸ್ಥಾನ ಗಳಿಸಲು ಸಾಧ್ಯವಾಗಿದೆ.
ಜಿಲ್ಲೆಯಲ್ಲಿ ಈವರೆಗೆ ನಡೆದ ಲಸಿಕಾಕರಣ ಅಭಿಯಾನ ಕಾರ್ಯಕ್ರಮಗಳ ಯಶಸ್ವಿಗೆ ಅಹರ್ನಿಶಿ ಶ್ರಮಿಸಿದ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಮತ್ತು ವಾರ್ಡ್ ಮಟ್ಟದ ಕೋವಿಡ್ ನಿಯಂತ್ರಣ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ/ನಗರ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು, ಕಂದಾಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತದ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಗೂ ಜಿಲ್ಲೆಯ ಸಮಸ್ತ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಧನ್ಯವಾದ ತಿಳಿಸುತ್ತಾ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಸಹಕಾರವನ್ನು ಮುಂದುವರೆಸಬೇಕೆಂದರು. ವಿಶೇಷವಾಗಿ ಜಿಲ್ಲೆಯಲ್ಲಿ ಲಸಿಕಾಕರಣ ಕಾರ್ಯಕ್ರಮಗಳ ಯಶಸ್ಸಿಗೆ ಜಿಲ್ಲಾ ಉಸ್ತುವಾರಿ ಸಚಿವರ ದಿನ ನಿತ್ಯದ ಮಾರ್ಗದರ್ಶನ ಹಾಗೂ ಸಹಕಾರವೆ ಪ್ರಮುಖ ಕಾರಣವಾಗಿದ್ದು, ಅವರಿಗೆ ಜಿಲ್ಲಾಧಿಕಾರಿಗಳು ಕೃತಜ್ಞತೆ ತಿಳಿಸಿದರು.
ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಬಾಕಿ ಇರುವ ವಿವರ: ಮೊದಲನೇ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಲಸಿಕೆ ಪಡೆಯಲು (ಪ್ರಸ್ತುತ ಇಂದಿನ ದಿನಾಂಕಕ್ಕೆ) ಜಿಲ್ಲೆಯಲ್ಲಿ ಒಟ್ಟು 15,313 ಮಂದಿ ಬಾಕಿ ಉಳಿದಿದ್ದು, ಈ ಪೈಕಿ ತಾಲ್ಲೂಕುವಾರು ಬಾಗೇಪಲ್ಲಿ 1,967, ಚಿಕ್ಕಬಳ್ಳಾಪುರ 4,648, ಚಿಂತಾಮಣಿ 806, ಗೌರಿಬಿದನೂರು 6,308, ಗುಡಿಬಂಡೆ 367 ಹಾಗೂ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 1,217 ಮಂದಿ ಬಾಕಿ ಇರುತ್ತಾರೆ. ಇವರೆಲ್ಲರಿಗೂ ಒಂದೆರಡು ದಿನದಲ್ಲಿ ಲಸಿಕೆಯನ್ನು ನೀಡಲು ಈಗಾಗಲೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈನಿಟ್ಟಿನಲ್ಲಿ ಲಸಿಕಾಕಾರ್ಯ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ.
ಎರಡನೇ ಡೋಸ್ ಲಸಿಕೆ ಪಡೆಯಲು ಜಿಲ್ಲೆಯಲ್ಲಿ ಅರ್ಹರಿರುವ ಜನರು ಹಾಗೂ ಮುಂದೆ ಅರ್ಹರಾಗುವ ಜನರು ಕೂಡಲೆ ಸಮೀಪದ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಎರಡೂ ಡೋಸ್ ಗಳ ಲಸಿಕಾಕರಣದಲ್ಲಿ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಶೇ. 100ರಷ್ಟು ಪ್ರಗತಿ ಸಾಧಿಸಿದ ಮೊದಲ ಜಿಲ್ಲೆಯಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಸಮಸ್ತ ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….