ದೊಡ್ಡಬಳ್ಳಾಪುರ: ತಾಲೂಕಿನಾಧ್ಯಂತ ಮಾದಕ ವಸ್ತು ವಿರೋಧಿ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ನೈಜೀರಿಯಾ ದೇಶದ ಪ್ರಜೆ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ವಂಶಿಕೃಷ್ಣ ಹಾಗೂ ಎಎಸ್ಪಿ ಲಕ್ಷ್ಮೀ ಗಣೇಶ್ ಅವರ ಸೂಚನೆಯ ಮೇರೆಗೆ ದೊಡ್ಡಬಳ್ಳಾಪುರ ವೃತ್ತದ ರಾಜಾನುಕುಂಟೆ, ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾರಲು ಯತ್ನಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಾನುಕುಂಟೆ: ಸಬ್ ಇನ್ಸ್‌ಪೆಕ್ಟರ್ ಗಜೇಂದ್ರ, ಭವಿತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಪಿಜಿ, ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಬಂದಿದ್ದ ವಿದೇಶಿ ಪ್ರಜೆ ಅಗ್ಬಾಯ್ ಅಜುಕ್ವು ಓನ್ವುಕಾ ಎಂಬಾತನನ್ನು ಬಂಧಿಸಿ, ಆತನ ಬಳಿಯಿದ್ದ ಪ್ರಚೋದಕ ಮಾತ್ರೆಗಳು, ಕ್ರಿಸ್ಟಲ್ ಮಿತ್ ಪುಡಿ, ಕೊಕೇನ್ ಹಾಗೂ ಎಲ್.ಎಸ್.ಡಿ ಸ್ಟಾಂಪ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ದೊಡ್ಡಬೆಳವಂಗಲ: ಸಬ್ ಇನ್ಸ್‌ಪೆಕ್ಟರ್ ಜ್ಞಾನಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ನಗರದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಮಾಹಿತಿ ಮೇರೆಗೆ ಅಮಿತ್ (21ವರ್ಷ) ಎಂಬುವವರನ್ನು ಬಂಧಿಸಿ ಸುಮಾರು ಒಂದು ಲಕ್ಷ ಮೌಲ್ಯದ (ಎಗ್ರೇಡ್) ಗಾಂಜಾ ವಶಪಡಿಸಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ನಗರ: ಸಬ್ ಇನ್ಸ್‌ಪೆಕ್ಟರ್ ಗೋವಿಂದ್ ನೇತೃತ್ವದಲ್ಲಿ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುವ ವೇಳೆ ದಾಬಸ್ ಪೇಟೆ ಕಡೆಯಿಂದ ದೊಡ್ಡಬಳ್ಳಾಪುರಕ್ಕೆ ಒಂದೇ ದ್ವಿಚಕ್ರ ವಾಹನದಲ್ಲಿ ಬಂದ ಮೂವರನ್ನು ತಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಸವಾರರು ಅನುಮಾನಸ್ಪದವಾಗಿ ವರ್ತಿಸಿದ ಕಾರಣ ಬ್ಯಾಗ್ ಚೆಕ್ ಮಾಡಿದಾಗ ಸುಮಾರು 20 ಸಾವಿರಕ್ಕೂ ಹೆಚ್ಚು ಮೌಲ್ಯದ ಗಾಂಜಾ ಸೊಪ್ಪು ಪತ್ತೆಯಾಗಿದೆ.
ಈ ಕುರಿತಂತೆ ಕೋಳಾಲ ವ್ಯಾಪ್ತಿಯ ರಂಗ (25), ದೊಡ್ಡಬಳ್ಳಾಪುರ ನಗರದ ರಾಕೇಶ್ (20), ತನುಶ್ (25) ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ: ಟಫೆ ಕಾರ್ಖಾನೆ ಬಳಿ ನಿಲ್ಲುತ್ತಿದ್ದ ಹೊರ ರಾಜ್ಯದ ಚಾಲಕರಿಗೆ ಗಾಂಜಾ ಸೋಪ್ಪು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಹಿನ್ನಲೆ, ನಿಗಾವಹಿಸಿದ್ದ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದ ಪೊಲೀಸರು ಗಾಂಜಾ ಸೊಪ್ಪುಗಳ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ..
ಹಲವು ದಿನಗಳಿಂದ ಸತತ ನಿಗಾವಹಿಸಿದ ಗ್ರಾಮಾಂತರ ಪೊಲೀಸರು ಇಂದು ಭರ್ಜರಿ ಬೇಟೆಯಾಡಿದ್ದಾರೆ. ಬಂಧಿತರನ್ನು ಮಾರಸಂದ್ರದ ಸುರೇಂದ್ರ (35 ವರ್ಷ), ದೊಡ್ಡಬಳ್ಳಾಪುರದ ಪವನ್ ಕುಮಾರ್ (19) ವರ್ಷ ಎನ್ನಲಾಗಿದ್ದು, ಆರೋಪಿಗಳಿಂದ 3 ಕೆಜಿ 100 ಗ್ರಾಂ ಮೌಲ್ಯದ ಎ ಗ್ರೇಡ್ ಗಾಂಜಾ ಸೊಪ್ಪನ್ನು ವಶ ಪಡಿಸಿಕೊಳ್ಳಲಾಗಿದೆ.
ವಿದ್ಯಾರ್ಥಿಗಳ ಭವಿಷ್ಯದ ಅರಿವಿಗೆ ಕಾರ್ಯಾಗಾರ ಅಗತ್ಯ: ಮಾದಕ ವಸ್ತುಗಳು ಸಮಾಜದ ಪಿಡುಗಾಗಿದ್ದು, ಅಮಾಯಕ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಗೆಡುವುತ್ತಿರುವ ಮಾದಕ ವಸ್ತುಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಾಗಾರ ಅಗತ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕ ವಸ್ತುಗಳ ಗುಂಗಿನಲ್ಲಿ ನಡೆಯುವ ಅಹಿತರ ಘಟನೆಗಳಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಕಾಲೇಜುಗಳ ಆಡಳಿತ ಮಂಡಳಿಗಳು ತಜ್ಞರು, ಪರಿಣಿತರು, ವೈದ್ಯರು, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಕಾರ್ಯಾಗಾರ ನಡೆಸಿ ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ವಿವರಿಸಬೇಕಿದೆ.
ಈ ಕಾರ್ಯಾಚರಣೆ ಸಾಧನೆಯಲ್ಲ, ಇದು ಸಮಾಜಕ್ಕೆ ಕಳಂಕವಾಗಿದೆ. ವಿದ್ಯಾರ್ಥಿಗಳ ಜೀವನವನ್ನು ಹಾಳುಗೆಡುವುತ್ತಿರುವ ಮಾದಕ ವಸ್ತುಗಳ ಮಾರಾಟ ಜಾಲದ ಬೇರನ್ನು ಭೇದಿಸಲು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….