ಬೆಂ.ಗ್ರಾ.ಜಿಲ್ಲೆ: ಮುಂಜಾಗ್ರತಾ ಕ್ರಮವಾಗಿ ಹೊಸಕೋಟೆ ನಗರದಲ್ಲಿ ಸಿಎಸ್ಆರ್ ನಿಧಿಯಡಿ 50 ಹಾಸಿಗೆಗಳ ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಿಸಿರುವುದು ಕೋವಿಡ್ ಮೂರನೇ ಅಲೆಯ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರಾದ ಎನ್.ನಾಗರಾಜ್ (ಎಂ.ಟಿ.ಬಿ.) ಅವರು ತಿಳಿಸಿದರು.
ಕರ್ನಾಟಕ ಸರ್ಕಾರ, ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯು.ಎನ್.ಡಿ.ಪಿ) ಮತ್ತು ಕಾರ್ಪೊರೇಟ್ ಕಂಪನಿಗಳ ಸಿ.ಎಸ್.ಆರ್. ಸಹಭಾಗಿತ್ವದಲ್ಲಿ ಅಮೇರಿಕನ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಮೂಲಕ ದಾನಿಗಳಾದ ಮಾಸ್ಟರ್‌ಕಾರ್ಡ್ ಇವರಿಂದ ಪ್ರಧಾನ ನೆರವು ದೊರೆತಿದ್ದು, ಸಾರಾಪ್ಲಾಸ್ಟ್ ಸಂಸ್ಥೆಯು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಹೊಸಕೋಟೆ ನಗರದಲ್ಲಿ ನಿರ್ಮಾಣ ಮಾಡಲಾದ 50 ಹಾಸಿಗೆಗಳ ಮೇಕ್‌ಶಿಫ್ಟ್ ಆಸ್ಪತ್ರೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಹೊಸಕೋಟೆ ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಈ ಆಸ್ಪತ್ರೆ ಸಹಕಾರಿಯಾಗಲಿದ್ದು, ಕೋವಿಡ್ ನಂತರವೂ ಸಾರ್ವಜನಿಕರ ಸೇವೆಗೆ ಲಭ್ಯವಿರಲಿದೆ ಎಂದರಲ್ಲದೆ, ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಿದ ಕಂಪನಿಗಳಿಗೆ ಸರ್ಕಾರದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತವು ಜಾರಿಗೆ ತಂದಿರುವ ‘ವೈದ್ಯರ ನಡೆ-ಹಳ್ಳಿ ಕಡೆ’ ಕಾರ್ಯಕ್ರಮದಡಿ ವೈದ್ಯರೇ ಜನರ ಬಳಿಗೆ ತೆರಳಿ, ಆರೋಗ್ಯ ಪರೀಕ್ಷೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟಲು ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಜನರು ಎಚ್ಚರಿಕೆಯಿಂದ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಹಾಗೂ ಸಾಮಾಜಿಕ ಅಂತರ ಪಾಲಿಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಹಲವಾರು ಕ್ರಮಗಳಿಂದಾಗಿ ಕೋವಿಡ್ ಸೋಂಕು ನಿಯಂತ್ರಣವಾಗುತ್ತಿದೆ ಎಂದರಲ್ಲದೆ, ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆಯನ್ನು ನೀಡುವ ಮೂಲಕ ಕೋವಿಡ್ ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ ಹಾಗೂ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣದ ಯಶಸ್ಸಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಶ್ರಮವಹಿಸಿದ್ದಾರೆ ಎಂದು ಶ್ಲಾಘಿಸಿದರು.
ನಗರೋತ್ಥಾನ ಯೋಜನೆಯಡಿ ಹೊಸಕೋಟೆ ನಗರದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈ ಕಾಮಗಾರಿಯಿಂದ ಹೊಸಕೋಟೆ ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ದೂರಾಗಲಿದೆ ಎಂದು ತಿಳಿಸಿದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್‌ಕುಮಾರ್ ಬಚ್ಚೇಗೌಡ ಅವರು ಮಾತನಾಡಿ, ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಹೊಸಕೋಟೆ ತಾಲ್ಲೂಕಿನಲ್ಲಿ ನಿರ್ಮಾಣವಾಗಬೇಕಿದ್ದ ಮೇಕ್‌ಶಿಫ್ಟ್ ಆಸ್ಪತ್ರೆಯು ತಡವಾಗಿಯಾದರೂ ವಿಶ್ವಸಂಸ್ಥೆ, ರಾಜ್ಯ ಸರ್ಕಾರ, ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮೇಕ್‌ಶಿಫ್ಟ್ ಆಸ್ಪತ್ರೆ ನಿರ್ಮಾಣಗೊಂಡಿರುವುದು ಹಾಗೂ ಕುಡಿಯುವ ನೀರಿನ ಕಾಮಗಾರಿ ಆರಂಭಕ್ಕೆ ಚಾಲನೆ ದೊರೆತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಸಚಿವರು ಹಾಗೂ ಶಾಸಕರು, ಹೊಸಕೋಟೆ ನಗರದಲ್ಲಿ ನಗರೋತ್ಥಾನ(ಮನ್ಸಿಪಾಲಿಟಿ-3) ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಅಂದಾಜು ರೂ. 4.64 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಅನುಗೊಂಡನಹಳ್ಳಿ ಪೊಲೀಸ್ ಠಾಣೆ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೇರವೇರಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ಹೊಸಕೋಟೆ ತಹಶೀಲ್ದಾರ್ ಗೀತಾ ಸೇರಿದಂತೆ ಆರೋಗ್ಯ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
50 ಹಾಸಿಗೆಯ ವಿಸ್ತರಿತ ಆಸ್ಪತ್ರೆಯ ಮುಂಭಾಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಏರ್ಪಡಿಸಲಾದ ಆರೋಗ್ಯ ಶಿಕ್ಷಣ ಕುರಿತ ವಸ್ತು ಪ್ರದರ್ಶನದಲ್ಲಿ ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಹೊಸಕೋಟೆ ನಗರದ ಗ್ಲೋಬಲ್ ಐ ಫೌಂಡೇಶನ್ ಹತ್ತಿರ, 44,000 ಚದರ ಅಡಿ ಪ್ರದೇಶದಲ್ಲಿ 6 ವಾರಗಳಲ್ಲಿ ಪೂರ್ಣಗೊಳಿಸಲಾದ ಮೇಕ್‌ಶಿಫ್ಟ್ ಆಸ್ಪತ್ರೆಯು 50 ಹಾಸಿಗೆಗಳನ್ನು ಹೊಂದಿದೆ. ಮೆಡಿಕ್ಯಾಬ್‌ನಲ್ಲಿ ಏಳು ಕ್ಯಾಬಿನ್‌ಗಳಿದ್ದು, ಒಂದು ಕ್ಯಾಬಿನ್‌ನಲ್ಲಿ, 8 ವೆಂಟಿಲೇಟರ್ ಹಾಸಿಗೆಗಳ ಸೌಲಭ್ಯದೊಂದಿಗೆ 1 ಐಸಿಯು ವಾರ್ಡ್, ಮೂರು ಕ್ಯಾಬಿನ್‌ನಲ್ಲಿ 14 ಹಾಸಿಗೆಗಳುಳ್ಳ ಜನರಲ್ ವಾರ್ಡ್, ಎರಡು ಕ್ಯಾಬಿನ್‌ನಲ್ಲಿ ಪುರುಷ ಹಾಗೂ ಮಹಿಳಾ ಕರ್ತವ್ಯ ನಿರತ ವೈದ್ಯರ ಕೊಠಡಿ, ಒಂದು ಕ್ಯಾಬಿನ್‌ನಲ್ಲಿ ನರ್ಸಿಂಗ್ ಸ್ಟೇಷನ್ ಅನ್ನು ಒಳಗೊಂಡಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….