ದೊಡ್ಡಬಳ್ಳಾಪುರ: ತಾಲೂಕಿಗೆ ಬಿಜೆಪಿ ಸರ್ಕಾರದ ಕೊಡುಗೆ ಏನು ಎಂದು ಇಲ್ಲಿ ಸಮಾವೇಶ ಆಯೋಜಿಸುತ್ತಿದ್ದಾರೆ. ಒಟ್ಟಾರೆ ರಾಜ್ಯದಲ್ಲಿಯೂ ಸಹ ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಲೇ ಬಂದಿದ್ದು, ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಬಿಜೆಪಿ ಜನೋತ್ಸವ ಸುಳ್ಳು ಭರವಸೆಗಳ ಉತ್ಸವವಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಟೀಕಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅನ್ನಭಾಗ್ಯ, ಕ್ಷೀರಭಾಗ್ಯ, ವಸತಿ ಭಾಗ್ಯ ಮೊದಲಾಗಿ, ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಸರ್ಕಾರದ ಸಾಧನೆಗಳನ್ನು ಮುಂದಿಟ್ಟಿದ್ದೆವು.

ತಾಲೂಕಿನಲ್ಲಿಯೂ ಸಹ ಇಎಸ್‍ಐ ಆಸ್ಪತ್ರೆ, ಹಲವಾರು ವಿದ್ಯಾರ್ಥಿನಿಲಯಗಳ ನಿರ್ಮಾಣವಾಗಿದ್ದವು. ಈಗ ಬಿಜೆಪಿ ಸರ್ಕಾರ ಮೂರು ವರ್ಷಗಳಲ್ಲಿ ದೊಡ್ಡಬಳ್ಳಾಪುರ ವಿಧಾನ ಸಭೆ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ. ಆ ಪಟ್ಟಿ ಬಿಡುಗಡೆ ಮಾಡಲಿ, ಪಕ್ಷದ ಸಾಧನೆ ಮಾಡುವ ಮುನ್ನ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಲಿ. ನಾನು ಅಭಿವೃದ್ದಿ ಮಾಡಿರುವುದನ್ನು ಪಟ್ಟಿ ನೀಡಿ ಚರ್ಚಿಸಲು ಸಿದ್ದ ಎಂದರು.
ಬಿಜೆಪಿ ಸರ್ಕಾರದ ಸುಳ್ಳಿನ ಆಶ್ವಾಸನೆ ಕೇಳಿ ಕೇಳಿ ಬೇಸತ್ತಿದೆ. 2023ಕ್ಕೆ ಚುನಾವಣೆ ಹಿನ್ನೆಲೆ ಬೇಕಾಬಿಟ್ಟಿ ಭರವಸೆ ನೀಡಲು ಬರುತ್ತಿದ್ದಾರೆ. ಮತದಾರರಿಗೆ ಸುಳ್ಳನ್ನು ಹೇಳಿಸಲು ಈ ಸಮಾವೇಶ ಮಾಡುತ್ತಿದೆಯೇ…? ಕನಿಷ್ಠ ಹಿಂದಿನ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಿದ್ದರೆ ನಾವೇ ಪ್ರಶಂಸೆ ಮಾಡುತ್ತಿದ್ದೆವು.
ಯಡಿಯೂರಪ್ಪ ಮಧುರೆ ಕೆರೆಗೆ ನೀರು, ಆರ್.ಅಶೋಕ್ ಹೈಟೆಕ್ ಬಸ್ ನಿಲ್ದಾಣದ ಭರವಸೆ ನೀಡಿದ್ದು ನೆನಪಿದೆ. ಆದರೆ ಯಾವುದೂ ಈಡೇರಿಲ್ಲ. ಜಿಲ್ಲಾಸ್ಪತ್ರೆಯ ವಿಚಾರವನ್ನಾದರೂ ಸಹ ಈಗ ಮುಂದಿಡಲಿ. ಬೆಲೆ ಏರಿಕೆ ಜನರಿಗೆ ಜನರನ್ನು ತೀವ್ರವಾಗಿ ಕಂಗೆಡುವಂತೆ ಮಾಡಿದೆ. ಡಿಸೇಲ್, ಪೆಟ್ರೋಲ್ ಅಡುಗೆ ಅನಿಲ, ಕೇಬಲ್, ಅಡುಗೆ ಎಣ್ಣೆ ಬೆಲೆ ಏರಿಕೆ, ಹಾಲು, ಮಜ್ಜಿಗೆ ಮೊಸರು, ಹಪ್ಪಳದ ಮೇಲೆ ತೆರಿಗೆ ಹಾಕಿದ್ದು ಸಾಧನೆಯೇ…ಎಂದು ಪ್ರಶ್ನಿಸಿ ವೆಂಕಟರಮಣಯ್ಯ, ಬಡವರಿಗೆ ಪಿಂಚಣಿ, ಪಡಿತರ ಚೀಟಿ, ನೀಡಲಾಗಿತ್ತು. ಅದರೆ ಪಡಿತರ, ಪಿಂಚಣಿ ತಡೆದ ಕಾರಣ ಬಡ ಜನತೆಯ ಶಾಪ ಬಿಜೆಪಿ ಸರ್ಕಾರವನ್ನು ತಟ್ಟಲಿದೆ.
ಆರಂಭದ ದಿನದಿಂದ ಸೋಲಿನ ಭೀತಿ ನನಗಿಲ್ಲ. ತಾಲೂಕಿನ ಮತದಾರರ ನೀಡಿದ ಅಧಿಕಾರವನ್ನು ಅಭಿವೃದ್ಧಿ, ತಾಲೂಕಿನ ಶಾಂತಿಗೆ ಮೀಸಲಿಡಲಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ಒಂದು ವರ್ಷದ ಸಾಧನ ಸಮಾವೇಶ, ಸರ್ಕಾರಿ ಕಾರ್ಯಕ್ರಮವ..? ಅಥವಾ ಪಕ್ಷದ ಕಾರ್ಯಕ್ರಮವ…? ಎಂದು ಸ್ಪಷ್ಟನೆ ನೀಡಬೇಕಿದೆ. ನಗರಸಭೆ, ತಾಲೂಕು ಆಡಳಿತದ ಅಧಿಕಾರಿಗಳು ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸರ್ಕಾರಿ ಕಾರ್ಯಕ್ರಮವಾದರೆ ನಮ್ಮ ಆಕ್ಷೇಪವಿಲ್ಲ. ಆದರೆ ಪಕ್ಷದ ಕಾರ್ಯಕ್ರಮವೆಂದರೆ ಅಧಿಕಾರಿಗಳ ದುರುಪಯೋಗ ಎಷ್ಟು ಸರಿ ಎಂಬುದಕ್ಕೆ ಉತ್ತರ ನೀಡಬೇಕು.
ಬಿಜೆಪಿ ಸರ್ಕಾರದಲ್ಲಿ ಪಿಎಸ್‍ಐ ಹಗರಣ, ಐಪಿಎಸ್ ಹಿರಿಯ ಅಧಿಕಾರಿಗಳು ಜೈಲಿಗೆ ಹೋಗಿದ್ದಾ ಸಾಧನೆ..? ಕೋವಿಡ್ ಸಂದರ್ಭದಲ್ಲಿ ಹಗರಣ, ಪಠ್ಯಪುಸ್ತಕ ಪರಿಷ್ಕರಣೆ ಸಾಧನೆಯೆ.? ಅಥವಾ ಹಿಜಾಬ್, ಹಲಾಲ್ ಮೂಲಕ ಮತೀಯ ಭಾವನೆ ಕೆರಳಿಸಿದ್ದು ಇದು ಸಾಧನೆಯೇ..? ಎಂಬುದಕ್ಕೆ ಸ್ಪಷ್ಟನೆ ನೀಡಬೇಕಿದೆ.
ಗುತ್ತಿಗೆ ದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಶೇ.40 ಕಮಿಷನ್ ಆರೋಪ ಸಾಧನೆಯೇ..? ಇವರ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ..? ಇವಕ್ಕೆ ಸ್ಪಷ್ಟನೆ ನೀಡಿ ಸಾಧನ ಆದ್ರೂ ಮಾಡಿಕೊಳ್ಳಲಿ ಭ್ರಷ್ಟಾಚಾರದ ಸಮಾವೇಶದ ಉತ್ಸವವನ್ನಾದರೂ ಮಾಡಿಕೊಳ್ಳಲಿ ಎಂದರು.
ಕಾಂಗ್ರೆಸ್ ನಗರ ಅಧ್ಯಕ್ಷ ಕೆ.ಪಿ.ಜಗನಾಥ್ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಮುಖಂಡರಾದ ಹೇಮಂತರಾಜ್, ವಿನೋದ್, ರಮೇಶ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
