ದೊಡ್ಡಬಳ್ಳಾಪುರ: ಕನ್ನಡ ಭಾಷೆ ಮತ್ತು ಭಾಷಿಕರ ಕುರಿತು ನಿರಂತರ ಚಿಂತನೆ ನಡೆಸಬೇಕಾಗಿದೆ. ಕನ್ನಡಿಗರ ಬದುಕು ಹಸನಗೊಳಿಸುವ ಕಡೆಗೆ ಗಮನ ನೀಡಬೇಕಾಗಿದೆ ಎಂದು ಕನ್ನಡ ಪರ ಹಿರಿಯ ಹೋರಾಟಗಾರ ಜಿ.ಸತ್ಯನಾರಾಯಣ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡಪರ ಹೋರಾಟಗಾರರು ಸ್ಥಳೀಯ ಉದ್ಯೋಗಾವಕಾಶಗಳನ್ನು ದೊರಕಿಸಿ ಕೊಡುವ ಗಮನ ನೀಡಬೇಕಾಗಿದೆ. ಅನ್ಯ ಭಾಷಿಕರ ಹೆಚ್ಚಳದಿಂದ ಕನ್ನಡಿಗರು ಉದ್ಯೋಗಾವಕಾಶಗಳನ್ನು ಕಳೆದು ಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಎಂದರು.
ಕನ್ನಡ, ಕನ್ನಡಿಗರು ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಗ್ಗೆ ಸರ್ಕಾರಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗಬಾರದು. ಕನ್ನಡಪರ ಸಂಘಟನೆಗಳು ಪ್ರಾಮಾಣಿಕ ಹೋರಾಟವನ್ನು ನಡೆಸಬೇಕು. ಕನ್ನಡ ಬದುಕಿನ ಭಾಷೆಯಾಗಬೇಕು. ಕನ್ನಡದ ಅನನ್ಯ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಎಲ್ಲಾ ಕನ್ನಡಿಗರ ಆದ್ಯ ಕರ್ತವ್ಯವಾಗಬೇಕೆಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು, ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಗೌರವ ಕಾರ್ಯದರ್ಶಿ ಎ.ಜಯರಾಮ, ಕೋಶಾಧ್ಯಕ್ಷ ಸಾ.ಲ.ಕಮಲನಾಥ, ಪ್ರತಿನಿಧಿ ಆರ್.ಗೋವಿಂದರಾಜು, ಗೌರವ ಕಾರ್ಯದರ್ಶಿ ಗಿರೀಶ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಷಫೀರ್, ಕನ್ನಡಪರ ಸಂಘನೆಗಳ ಮುಖಂಡರು ಮತ್ತು ಪೌರ ಕಾರ್ಮಿಕರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

