ದೊಡ್ಡಬಳ್ಳಾಪುರ, (ನ.04): ಗೋಕಾಕ್ ಚಳುವಳಿಯೂ ಸಮಸ್ತ ಕನ್ನಡಿಗರ ಸ್ವಾಭಿಮಾನವನ್ನು ಜಾಗೃತಗೊಳಿಸಿತು ಎಂದು ಕನ್ನಡಪರ ಹಿರಿಯ ಹೋರಾಟಗಾರ ತ.ನ.ಪ್ರಭುದೇವ್ ತಿಳಿಸಿದರು.

ಅವರು ನಗರದ ಎಂಎಬಿಎಲ್ ಪ್ರೌಢಶಾಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಹೋರಾಟದ ಸ್ಫೂರ್ತಿ ಡಾ.ಎನ್.ವೆಂಕಟರೆಡ್ಡಿ ದಶಕದ ಸ್ಮರಣೆಗಾಗಿ ನಡೆಯುತ್ತಿರುವ ಸಾಹಿತ್ಯ, ವಿಜ್ಞಾನ, ಸಂಸ್ಕೃತಿ ಸಮಾಗಮ ಕಾರ್ಯಕ್ರಮದಲ್ಲಿ ಗೋಕಾಕ್ ಚಳುವಳಿ ಎಂಬ ವಿಷಯ ಕುರಿತು ಮಾತನಾಡಿದರು.

ಕನ್ನಡ ಭಾಷೆಯನ್ನು ಕರ್ನಾಟಕದ ಅಧೀಕೃತ ಆಡಳಿತ ಭಾಷೆಯಾಗಿ, ಶಾಲಾ ಶಿಕ್ಷಣದಲ್ಲಿ ಕಡ್ಡಾಯಗೊಳಿಸಲು ಗೋಕಾಕ್ ಚಳುವಳಿ ಸಹಕಾರಿಯಾಯಿತು ಎಂದರು.
ಕನ್ನಡ ಭಾಷೆಯ ಅಸ್ತಿತ್ವಕ್ಕೆ ನಡೆದ ದೊಡ್ಡ ಮಟ್ಟದ ಕನ್ನಡಪರ ಚಳುವಳಿಯನ್ನು ಡಾ.ರಾಜ್ ಕುಮಾರ್ ಸೇರಿದಂತೆ ಅಸಂಖ್ಯಾತ ಸಾಹಿತಿಗಳು, ಕಲಾವಿದರು ಮುನ್ನೆಡಿಸುದರು. ಇದರ ಫಲವಾಗಿ ಭಾಷೆ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ದೊರೆಯಬೇಕೆಂಬ ಹಕ್ಕೊತ್ತಾಯ ಯಶಸ್ವಿಯಾಗಲು ಸಾಧ್ಯವಾಯಿತು ಎಂದರು.
ಮಾನವ ಮತ್ತು ವಿಜ್ಞಾನ ಎಂಬ ವಿಷಯ ಕುರಿತು ಮಾತನಾಡಿದ ವಿಜ್ಞಾನ ಶಿಕ್ಷಕಿ ಹೆಚ್.ಸಿ.ಜಮುನಾ, ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲರ ಬದುಕಿನ ಭಾಗವಾಗಿದೆ. ಗಾಢ ಪ್ರಭಾವವನ್ನು ಹೊಂದಿರುವ ವಿಜ್ಞಾನ ಮತ್ತು ಮಾನವನ ಜ್ಞಾನಕ್ಕೆ ಮಾನವೀಯ ಮೌಲ್ಯಗಳು ಸೇರಿರಬೇಕಾಗಿದೆ. ಇದರಿಂದ ಮನುಕುಲ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕಿ ಸಿ.ನಿರ್ಮಲ ವಹಿಸಿದ್ದರು. ಕನ್ನಡ ಜಾಗೃತ ಪರಿಷತ್ತು ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಶಿವರಾಜಕುಮಾರ್ ಸೇನಾ ಸಮಿತಿ ಅಧ್ಯಕ್ಷ ಆರ್.ರಮೇಶ್, ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಕೋಶಾಧ್ಯಕ್ಷ ಜಿ.ಸುರೇಶ್, ತಾಲ್ಲೂಕು ಪ್ರತಿನಿಧಿ ಆರ್.ಗೋವಿಂದರಾಜು, ಸಮಷ್ಠಿ ರಂಗ ಶಾಲೆಯ ದಿವಾಕರನಾಗ್, ಚಿದಾನಂದ್ ಮತ್ತು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
