ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಡಿಜಿಟಲ್ ರೂಪ ನೀಡಿ , ಆನ್‌ಲೈನ್ ಸೇವೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ ಇ – ಸ್ವತ್ತು ‘ ( ಇ ಖಾತಾ ) ಯೋಜನೆ ಲಂಚ ಕೊಟ್ಟವರಿಗಷ್ಟೇ ಸೀಮಿತವಾದ ಸ್ವತ್ತಾಗುತ್ತಿದೆ ಎಂಬ ಆರೋಪ ತಾಲೂಕಿನಲ್ಲಿ ವ್ಯಾಪಕವಾಗಿದೆ.

ಇದರಿಂದಾಗಿ ಜನಸಾಮಾನ್ಯರಿಗೆ ಇ – ಖಾತಾ ಸೌಲಭ್ಯ ಕೈಗೆಟುಕದಂತಾಗಿದೆ. ಲಂಚದ ಬೇಡಿಕೆಯಿಂದಾಗಿ ಗ್ರಾಮ ಠಾಣಾದಲ್ಲಿ ನೆಲೆಸಿರುವ ರೈತಾಪಿ ಜನರು ಪಿತ್ರಾರ್ಜಿತ ಆಸ್ತಿಗೂ ಇ – ಖಾತಾ ಪಡೆಯಲಾಗುತ್ತಿಲ್ಲ .

ಹಳ್ಳಿಗಳಲ್ಲಿ ಇರುವ ಸೈಟು, ಮನೆ, ಕಟ್ಟಡಗಳಿಗೆ ಇ – ಖಾತಾ ಮುಖ್ಯವಾಗಿವೆ. ಇಲ್ಲವಾದರೆ, ಕಾನೂನಡಿ ಮಾನ್ಯತೆ ಇರುವುದಿಲ್ಲ. ಉಪ ನೋಂದಣಿ ಕಚೇರಿಯಲ್ಲಿ ಸುಲಭವಾಗಿ ನೋಂದಾಯಿಸಬಹುದು. ಇ – ಸ್ವತ್ತು ಇಲ್ಲವಾದರೆ, ದಾನಪತ್ರ, ಸೇಲ್ ಡೀಡ್, ಬ್ಯಾಂಕ್ ಸಾಲ, ಹಕ್ಕು ಬಿಡುಗಡೆ ಪತ್ರ ಇನ್ನಿತರ ಕರಾರುಗಳನ್ನು ಉಪ ನೋಂದಣಿ ಕಚೇರಿಯಲ್ಲಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಇ – ಸ್ವತ್ತು ಕಡ್ಡಾಯ ಮಾಡಲಾಗಿದೆ.
ಆದರೆ ಇ -ಖಾತಾ ಮಾಡುವುದು ಗ್ರಾಮಪಂಚಾಯಿತಿಯಾದರು ಸ್ವತ್ತಿನ ಸರ್ವೆ ಮಾಡಬೇಕಾದ್ದು, ಸರ್ವೆ ಇಲಾಖೆ ವಿಪರ್ಯಾಸ ಸರ್ವೆ ನಡೆಸಲು ಬರುವ ಅಧಿಕಾರಿಗಳು ಇಂತಿಷ್ಟು ಲಂಚದ ಹಣ ನೀಡಿದರಷ್ಟೇ ಸರ್ವೆ ನಕ್ಷೆ ನೀಡುತ್ತಾರೆ ಎಂಬ ಆರೋಪ ತಾಲೂಕಿನಲ್ಲಿ ವ್ಯಾಪಕವಾಗಿದೆ.
3 – 4 ಸಾವಿರ ಫಿಕ್ಸ್..?: ಇ – ಸ್ವತ್ತಿಗೆ ಸರ್ವೆ ಮಾಡಲು ಸರ್ಕಾರಿ ಶುಲ್ಕ 800ರೂ ಮಾತ್ರವಿದ್ದು, ಇದೇ ಹಣದಲ್ಲಿ ಸರ್ವೆ ನಡೆಸುವ ಅಧಿಕಾರಿಗಳಿಗೆ ಹಣ ಸಂದಾಯವಾಗುತ್ತದೆ. ಆದರೆ ಪ್ರತಿ ಸರ್ವೆ ಕಾರ್ಯಕ್ಕೆ ಕೆಲ ಅಧಿಕಾರಿಗಳು 3ರಿಂದ 4 ಸಾವಿರ ಲಂಚದ ಹಣ ಫಿಕ್ಸ್ ಮಾಡಿಕೊಂಡಿದ್ದು, ಹಣ ನೀಡದ ಹೊರತು ನಕ್ಷೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸರ್ಕಾರಿ ಭೂಮಿಗೂ ಲಂಚ.!: ಅದಕ್ಕಿಂತ ವಿಪರ್ಯಾಸವೆಂದರೆ ಹೆಸರೇಳಲು ಇಚ್ಚಿಸದ ಪಿಡಿಒ ಒಬ್ಬರ ಮಾಹಿತಿಯಂತೆ. ಸಾರ್ವಜನಿಕರದ್ದಷ್ಟೇ ಅಲ್ಲ ಸರ್ಕಾರಿ ಜಮೀನಿನ ನಕ್ಷೆ ಮಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಪಡೆಯಲು, ಗ್ರಾಪಂ ಪಿಡಿಒಗಳಿಂದ ಕೆಲ ಸರ್ವೆಯರ್ ಗಳು ಲಂಚದ ಹಣಕೇಳುತ್ತಾರೆಂಬುದಾಗಿದೆ. ಇಂತಹ ಆಘಾತಕಾರಿ ಬೆಳವಣಿಗೆ ತಾಲೂಕಿನಲ್ಲಿ ಕಂಡುಬಂದಿರುವುದು ಇ-ಸ್ವತ್ತು ನಕ್ಷೆ ತಯಾರಿಸಲು ಹೆಚ್ಚುವರಿ ಲಂಚದ ಬೇಡಿಕೆ ಆರೋಪಕ್ಕೆ ಇಂಬು ನೀಡುವಂತಿದೆ.
ಈ ಕುರಿತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದ್ದು, ಲಂಚದ ಹಣಕ್ಕಾಗಿ ಬಡ ಜನರಿಗೆ ತೊಂದರೆ ಮಾಡುವವರ ಕಡಿವಾಣ ಹಾಕಬೇಕಿದೆ.
ದೂರು ನೀಡಿ: ಈ ಕುರಿತಂತೆ ಹರಿತಲೇಖನಿ ಎಡಿಎಲ್ ಆರ್ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಪಡೆದಿದ್ದು, ಸರ್ಕಾರಿ ಶುಲ್ಕ ಹೊರತು ಪಡಿಸಿ ಹೆಚ್ಚಿನ ಹಣದ ಬೇಡಿಕೆ ಇಟ್ಟರೆ, ಸಾರ್ವಜನಿಕರು ತಾಲೂಕು ಮಟ್ಟದ ಎಡಿಎಲ್ ಆರ್, ಜಿಲ್ಲಾ ಮಟ್ಟದ ಡಿಡಿಎಲ್ ಅರ್ ಅವರಿಗೆ ದೂರು ನೀಡಬಹುದಾಗಿದ್ದು, ಲಂಚದ ಬೇಡಿಕೆ ಇಡುವ ಅಧಿಕಾರಿ ವಿರುದ್ದ ಕ್ರಮಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
