ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯ, ಶನಿಮಹಾತ್ಮ ದೇವಾಲಯದಲ್ಲಿ ಮಂಗಳವಾರ ರಾಹುಗ್ರಸ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಬೆಳಿಗ್ಗೆ 10.30 ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಲಾಯಿತು.
ಚಂದ್ರಗ್ರಹಣದ ಅಂಗವಾಗಿ ಬೆಳಿಗ್ಗೆ 6 ರಿಂದಲೇ ಸ್ವಾಮಿಗೆ ಹಾಲಿನ ಅಭಿಷೇಕ, ಗಂಧದ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಡೆದು 7.30ಕ್ಕೆ ಮಹಾ ಮಂಗಳಾರತಿ ನೆರವೇರಿಸಿ ದೇವರ ದರ್ಶನಕ್ಕೆ ಭಕ್ತರಿಗೆ ಅನುಕೂಲ ಮಾಡಿಕೊಡಲಾಯಿತು.
ಬೆಳಿಗ್ಗೆ 10.30 ಗಂಟೆಗೆ ದೇವರಿಗೆ ದರ್ಬೆ ದಿಗ್ಬಂಧನ ಹಾಕಿ ಬಾಗಿಲು ಮುಚ್ಚಲಾಯಿತು. ಸಾಮಾನ್ಯವಾಗಿ ಮಂಗಳವಾರದಂದು ಘಾಟಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಂದು ಗ್ರಹಣದ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಸಾವಿರಾರು ಜನ ಭಕ್ತರು ಆಗಮಿಸಿ ಗ್ರಹಣ ಆರಂಭಕ್ಕೂ ಮುನ್ನ ದೇವರ ದರ್ಶನ ಪಡೆದರು.
ಸಂಜೆ ಚಂದ್ರಗ್ರಹಣ ಮುಕ್ತಾಯದ ನಂತರ ದೇವಸ್ಥಾನವನ್ನು ಶುಚಿಗೊಳಿಸಿ ಸ್ವಾಮಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಚಂದ್ರಗ್ರಹಣದ ಹಿನ್ನಲೆಯಲ್ಲಿ ತಾಲೂಕಿನ ಕೆಲ ಶಾಲೆಗಳು ಸಂಜೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮಕ್ಕಳನ್ನು ಮನೆಗೆ ಕಳುಹಿಸಿದರೆ, ನಗರದ ಪ್ರಮುಖ ಪೊಟೋ ಫ್ರೆಂ ವರ್ಕ್ಸ್, ಕೆಲ ಅಂಗಡಿಗಳು ಬಾಗಿಲು ಮುಚ್ಚಿದ್ದವು.
ತಾಲ್ಲೂಕಿನಲ್ಲಿ ಸಂಜೆ 6.10ರ ಸುಮಾರಿನಲ್ಲಿ ಚಂದ್ರಗ್ರಹಣ ಅಲ್ಪ ಪಮಾಣದಲ್ಲಿ ಕಂಡು ಬಂತು. ಚಂದ್ರನ ಬಲಭಾಗದ ಮೇಲ್ಬಾಗದ ಅಂಚಿನಲ್ಲಿ ಭೂಮಿಯ ನೆರಳಿನಿಂದ ಕಪ್ಪಾಗಿರುವ ಭಾಗ ಕಂಡು ಬಂತು. 6.30ರ ಸುಮಾರಿಗೆ ಕೆಂಪಾಗಿರುವ ಚಂದ್ರನ ಪೂರ್ಣ ಬಿಂಬ ಗೋಚರಿಸಿತು.
ಚಂದ್ರಗ್ರಹಣ ಮುಕ್ತಾಯವಾಗುತ್ತಲೇ ಮಹಿಳೆಯರು ಮನೆ ಅಂಗಳದಲ್ಲಿ ಗರಿಕೆ ಹುಲ್ಲು, ದರ್ಬೆಯ ಒಂದೆರಡು ಗರಿಗಳನ್ನು ಹಾಕಿ ನೀರಿನಿಂದ ಶುಚಿಗೊಳಿಸುತ್ತಿದ್ದ ದೃಶ್ಯ ಎಲ್ಲಡೆ ಕಂಡು ಬಂತು. ಅಲ್ಲದೆ ಮನೆಯಲ್ಲಿ ಸಿದ್ದಪಡಿಸಿದ ಸಿಹಿ ಪೊಂಗಲ್ಲನ್ನು ಮನೆಯ ಮೇಲ್ಛಾವಣಿಯಲ್ಲಿ ಎಡೆಯಿಟ್ಟು ಪೂಜಿಸಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

