
ಪರಾಶರ ವಂಶದಿಂದ ಬಂದಿರುವ ವಿಶ್ವರೂಪ ಎಂಬ ಬ್ರಾಹ್ಮಣನಿಗೆ ಒಬ್ಬ ಮಗನಿದ್ದನು. ಅವನ ಹೆಸರು ಬಕ. ವಿಶ್ವರೂಪ ಶಿವಭಕ್ತನಾಗಿದ್ದು ಶಿವನನ್ನು ಆರಾಧಿಸುತ್ತಿದ್ದ.

ಒಮ್ಮೆ ಬಕನು ಉತ್ತರಾಯಣ ಕಾಲದಲ್ಲಿ ತನ್ನ ತಂದೆ ಪೂಜೆ ಮಾಡುತ್ತಿದ್ದ ಶಿವಲಿಂಗವನ್ನು ತೆಗೆದು, ತುಪ್ಪದ ಪಾತ್ರೆಯೊಳಗೆ ಮುಚ್ಚಿಟ್ಟನು.

ಮರುದಿನ ಬೆಳಿಗ್ಗೆ ಅವನ ತಂದೆ ಪೂಜೆ ಮಾಡಲು ಶಿವಲಿಂಗ ಕಾಣದಿದ್ದಾಗ ಮಗನನ್ನು ವಿಚಾರಿಸಲಾಗಿ, ತಾನು ಶಿವಲಿಂಗವನ್ನು ತುಪ್ಪದ ಪಾತ್ರೆಯೊಳಗೆ ಇಟ್ಟಿದ್ದನ್ನು ಹೇಳಿದನು.
ಉತ್ತರಾಯಣ ಪರ್ವಕಾಲದಲ್ಲಿ ಶಿವಲಿಂಗವನ್ನು ತುಪ್ಪದ ಪಾತ್ರೆಯೊಳಗೆ ಇಟ್ಟಿರುವ ಪುಣ್ಯಫಲದಿಂದಾಗಿ, ಮುಂದಿನ ಜನ್ಮದಲ್ಲಿ ಒಬ್ಬ ರಾಜನ ಮಗನಾಗಿ ಜನಿಸಿದ.
ಪೂರ್ವಜನ್ಮಥ ಸ್ಮರಣೆಯಿಂದ ಆತನು ಪೂಜೆಯಾದ ನಂತರ ಪ್ರತಿನಿತ್ಯ ಶಿವನನ್ನು ತುಪ್ಪದಲ್ಲಿ ಮುಳುಗಿಸುತ್ತಿದ್ದ.
ಇದರಿಂದ ಸಂತುಷ್ಟನಾದ ಪರಮೇಶ್ವರನು, ಇವನಿಗೆ ‘ಪ್ರತೀಪಪಾಲಕ’ ಎಂಬ ಹೆಸರನ್ನು ಇಟ್ಟು ತನ್ನ ಗಣಗಳ ಜೊತೆಗೆ ಸೇರಿಸಿಕೊಂಡನು. ಶಿವ ಪೂಜೆಯ ಪುಣ್ಯಫಲದ ಕಾರಣ ಶಿವಗಣಗಳಲ್ಲಿ ಒಬ್ಬನಾಗಿ ಇರತೊಡಗಿದನು.
ಒಮ್ಮೆ ಈತನು ಹಿಮಾಲಯದ ಪ್ರಾಂತ್ಯದಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿರುವ ‘ಗಾಲವ ಮುನಿಗಳ’ ಪತ್ನಿಯು ಇವನ ಕಣ್ಣಿಗೆ ಬಿದ್ದಳು. ಅವಳ ಸೌಂದರ್ಯಕ್ಕೆ ಮಾರುಹೋಗಿ ಅವಳನ್ನು ಪಡೆಯುವ ಸಲುವಾಗಿ ‘ಗಾಲವ’ ಮುನಿಗಳಲ್ಲಿ ಶಿಷ್ಯನಾಗಿ ಸೇರಿಕೊಂಡು ಮುನಿಗಳ ಸೇವೆ ಮಾಡತೊಡಗಿದ.
ಸಮಯಕ್ಕಾಗಿ ಕಾಯುತ್ತಾ ಒಮ್ಮೆ ಗಾಲವ ಮುನಿಗಳು ಇಲ್ಲದ ಸಮಯದಲ್ಲಿ, ಅವರ ಪತ್ನಿಯನ್ನು ಅಪಹರಿಸುವ ಕಾರ್ಯದಲ್ಲಿ ತೊಡಗಿದ. ಈ ವಿಚಾರವು ಗಾಲವ ಮುನಿಗಳಿಗೆ ತಿಳಿದು ಅವರು ಶಿವಗಣನಾಗಿದ್ದ ಬಕನಿಗೆ, ಉಪಾಯವಾಗಿ ನನ್ನ ಶಿಷ್ಯನಾಗಿ ಸೇರಿಕೊಂಡು ಬಕನಂತೆ ಸಮಯಕ್ಕಾಗಿ ಕಾದಿದ್ದು ನಿನ್ನ ಕಾರ್ಯವನ್ನು ಸಾಧಿಸುವ ಗುಣ ಹೊಂದಿರುವ ನೀನು ಬಕನಾಗಿ ಜನಿಸು ಎಂದು ಶಾಪ ಕೊಟ್ಟರು.
ಆನಂತರ ಬಕನು ಹೆದರಿ ಗಾಲವಮುನಿಗಳ ಪಾದ ಹಿಡಿದು ಇನ್ನಿಲ್ಲದಂತೆ ಬೇಡಿಕೊಂಡನು. ಇದರಿಂದ ಸಂಪ್ರೀತರಾದ ಗಾಲವರು, ನೀನು ಬಕ ಪಕ್ಷಿಯಾದ ಜನ್ಮದಲ್ಲಿ ಇಂದ್ರದ್ಯುಮ್ನ ಮಹಾರಾಜನನ್ನು ನೀನು ನೋಡಿದ ಸಮಯದಲ್ಲಿ ನಿನ್ನ ಶಾಪ ವಿಮೋಚನೆಯಾಗುತ್ತದೆ ಎಂದರು.
ಗಾಲವ ಮುನಿಗಳ ಶಾಪದಂತೆ ಬಕಪಕ್ಷಿಯಾಗಿ ಜನಿಸಿ ‘ನಾಳೀ ಜಂಘ’ ಎಂಬ ಹೆಸರಿನಿಂದ ಹಲವು ಕಾಲ ಹಿಮಾಲಯದ ತಪ್ಪಲಿನಲ್ಲಿ ಜೀವನವನ್ನು ಕಳೆದನು.
ಈ ಸಮಯದಲ್ಲಿ, ಬಕಪಕ್ಷಿ ಯಾಗಿ ಜನಿಸಿದರೂ ಪೂರ್ವ ಜನ್ಮದ ಸ್ಮರಣೆ ಇದ್ದ ಕಾರಣ ಸಾತ್ವಿಕ ರೀತಿಯಲ್ಲಿ ಜೀವನ ನಡೆಸುತ್ತಿತ್ತು. ಆ ಕಾಡಿಗೆ ಯಾರೇ ಅತಿಥಿಗಳು ಬಂದರೂ ಅವರನ್ನು ಆದರಿಸಿ ಉಪಚರಿಸುತ್ತಿತ್ತು.
ಹತ್ತಿರದಲ್ಲಿ ಉಗ್ರಸೇನ ಎಂಬ ರಾಕ್ಷಸರಾಜನು ಮತ್ತು ಬಕಪಕ್ಷಿಯು ಆತ್ಮೀಯ ಗೆಳೆಯರಾಗಿದ್ದರು. ಪ್ರತಿ ನಿತ್ಯವೂ ಬಕಪಕ್ಷಿಯು ರಾಕ್ಷಸರಾಜನಿಗೆ ಪುರಾಣ ಪುಣ್ಯ ಕಥೆಗಳನ್ನು ಹೇಳುತ್ತಿತ್ತು.
ಮಧ್ಯ ಪ್ರದೇಶದ ಒಂದು ಗ್ರಾಮದಲ್ಲಿ ಗೌತಮ ಎಂಬ ಬ್ರಾಹ್ಮಣನಿದ್ದ. ಅವನು ಶಾಸ್ತ್ರವನ್ನು ಓದಿದ್ದ. ತುಂಬಾ ಸೋಮಾರಿ. ಊರು ಬೇಸರವಾಗಿ ಕಾಡಿಗೆ ಹೋದ. ಬೇಡರ ಹಾಡಿಗೆ ಬಂದನು. ಬೇಡರ ನಾಯಕನ ಮನೆಯಲ್ಲಿ ಆಹಾರ ಕೇಳಿದ ಬೇಡರ ನಾಯಕ ಬ್ರಾಹ್ಮಣ ಎಂದು ಉಪಚರಿಸಿ. ಕೆಲ ಕಾಲ ಇರಲು ಹೇಳಿದ. ಇವನು ಸೋಮಾರಿಯಾದ ಕಾರಣ ಅಲ್ಲೇ ಉಳಿದನು. ಬೇಡರ ನಾಯಕ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ ಗೌತಮನು ಬೇಡರಂತೆ ಆದನು.
ಒಮ್ಮೆ ಹುಟ್ಟೂರಿನ ಗೆಳೆಯನೊಬ್ಬ ಎದುರಾದನು. ಅವನು ನೀನೇಕೆ ಬೇಡರ ಹಾಡಿಗೆ ಬಂದೆ ಮೊದಲು ಊರಿಗೆ ಬಾ ಎಂದು ಕರೆಯಲು, ನಾನು ಬರುವುದಿಲ್ಲ ಬೇರೆ ಕಡೆ ಹೋಗುವೆ ಎಂದು ಬೇಡರ ಹಾಡಿಯನ್ನು ಬಿಟ್ಟು ಕೆಲಸ ಅರಸುತ್ತಾ ನಾಳೀ ಜಂಘ ಬಕಪಕ್ಷಿಯಿದ್ದ ಕಾಡಿಗೆ ಬಂದನು.
ಬಕಪಕ್ಷಿಗೆ ಸ್ಮರಣೆ ಇದ್ದ ಕಾರಣ, ಬ್ರಾಹ್ಮಣ ಎಂದು ತಿಳಿದು, ಹಣ್ಣು ಹಂಪಲು ತಂದು ಕೊಟ್ಟು ಅತಿಥಿ ಸತ್ಕಾರ ಮಾಡಿ ಉಪಚರಿಸಿತು. ಅವನನ್ನು ಬಕಪಕ್ಷಿ ಪಿಚಾರಿಸಿದಾಗ, ತನ್ನ ಮುಂದಿನ ಬದುಕಿಗೆ ಏನಾದರೂ ಹುಡುಕಿಕೊಂಡು ಹೊರಟಿದ್ದೇನೆ ಎಂದನು. ಬಕಪಕ್ಷಿಯು ಉಗ್ರಸೇನ ರಾಜನ ಕುರಿತು ಹೇಳಿ ಏನಾದರೂ ಸಹಾಯ ಮಾಡುತ್ತಾನೆ ಹೋಗು ಎಂದು ಕೇಳಿಸಿತು.
ಉಗ್ರಸೇನ ರಾಜನು ಪ್ರತಿನಿತ್ಯವೂ ಸಾವಿರ ಜನ ಅತಿಥಿಗಳಿಗೆ ಅನ್ನದಾನ ಮಾಡುತ್ತಿದ್ದನು. ದೊಡ್ಡ ಬಂಗಾರದ ತಟ್ಟೆಯಲ್ಲಿ ಮೃಷ್ಟಾನ್ನ ಭೋಜನವನ್ನು ಬಡಿಸಿ ಅವರ ಊಟವಾದ ಮೇಲೆ ಆ ತಟ್ಟೆಯನ್ನು ಶುಚಿಗೊಳಿಸಿ ಅದರ ತುಂಬಾ ಮುತ್ತುರತ್ನ ಹವಳ ವಜ್ರಗಳನ್ನು ತುಂಬಿ ಸಾವಿರಾರು ಜನರಿಗೆ ಪ್ರತಿದಿನವೂ ದಾನ ಕೊಡುತ್ತಿದ್ದನು.
ಗೌತಮನು ಅಲ್ಲಿಗೆ ಹೋಗಿ ಬಕಪಕ್ಷಿ ಕಳಿಸಿದೆ ಎಂದನು. ಇವನ ವೇಷ ಭೂಷಣವನ್ನು ನೋಡಿ ಉಗ್ರ ಸೇನಗೆ ಅಸಮಾಧಾನ ವಾದರೂ ತನ್ನ ಸ್ನೇಹಿತನ ನೆನೆದು ಒಳ್ಳೆಯವನೇ ಇರಬೇಕೆಂದು ಒಳಗೆ ಕರೆದು ಬಂಗಾರದ ತಟ್ಟೆಯಲ್ಲಿ ಭೋಜನ ಬಡಿಸಿ, ಅದೇ ತಟ್ಟೆಯಲ್ಲಿ ಮುತ್ತು ರತ್ನ ಹವಳಗಳನ್ನು ತುಂಬಿಕೊಟ್ಟನು.
ಈ ಗೌತಮನು ಇಷ್ಟೇನಾ ಎಂದನು. ದುರಾಸೆ ಕಂಡ ಉಗ್ರಸೇನನು, ಹಿಂದುಗಡೆ ಬೇಕಾದಷ್ಟು ಮುತ್ತು ಹವಳ ರತ್ನಗಳ ಬೆಟ್ಟಗಳೇ ಇದೆ ತೆಗೆದುಕೊ ಎಂದನು. ಗೌತಮನು ಚೀಲಗಳ ತುಂಬಾ ತುಂಬಿಕೊಂಡು ಚೀಲಗಳನ್ನು ಎಳೆದುಕೊಂಡು ತನ್ನ ತಾಣಕ್ಕೆ ಬಂದನು.
ಬಕಪಕ್ಷಿಯು ಅವನು ಬರುತ್ತಿದ್ದಂತೆ, ನನ್ನ ಗೆಳೆಯ ಸಹಾಯ ಮಾಡಿದನೆ ಎಂದು ಕೇಳಿತು. ಹ್ಙೂಂ ಗುಟ್ಟಿದ ಅಷ್ಟೇ. ಮತ್ತೆ ರಾತ್ರಿ ನಾಳೀ ಜಂಘ ತಂದು ಕೊಟ್ಟ ಹಣ್ಣುಗಳನ್ನೆಲ್ಲ ತಿಂದು ಮಲಗಿ ಯೋಚಿಸಿದ. ನಾಳೆ ಮಧ್ಯಾಹ್ನದ ಊಟಕ್ಕೆ ಏನು ಮಾಡುಲಿ? ಇದು ಕಾಡು ಇಲ್ಲೇನು ಸಿಗುವುದಿಲ್ಲ ಯೋಚಿಸುತ್ತ ಉಪಕಾರ ಸ್ಮರಣೆ ಇಲ್ಲದ ಅವನು ರಾತ್ರಿ ನಿದ್ರೆ ಮಾಡುತ್ತಿದ್ದ ಬಕಪಕ್ಷಿಯನ್ನು ಕಡಿದು ಕೊಂದು ಅದರ ಮಾಂಸವನ್ನು ತುಂಬಿಕೊಂಡು ಹೊರಟನು.
ಉಗ್ರಸೇನ ರಾಜನಿಗೆ ಮೊದಲೇ ಅನುಮಾನವಿದ್ದು ಸೇವಕರನ್ನು ಕಳಿಸಿದ್ದನು.
ಅವರು ಗೌತಮನನ್ನು ಹಿಡಿದು ತಂದು ರಾಜನ ಮುಂದೆ ನಿಲ್ಲಿಸಿದರು. ಉಗ್ರಸೇನನು ಕೋಪದಿಂದ ಗೌತಮನನ್ನು ತುಂಡು ತುಂಡು ಮಾಡಿ ನಾಯಿ ಕಾಗೆ ಹದ್ದುಗಳಿಗೆ ಎಸೆಯಿರಿ ಎಂದು ಆಜ್ಞೆ ಮಾಡಿ ತನ್ನ ಸ್ನೇಹಿತ ನಾಳೀ ಜಂಘ ಬಕಪಕ್ಷಿಗೆ ಅಂತ್ಯಸಂಸ್ಕಾರ ಮಾಡಲು ಹೊರಟನು. ಅಗ್ನಿ ಸ್ಪರ್ಶ ಮಾಡುವ ಸಮಯಕ್ಕೆ ದೇವೇಂದ್ರ ಬಂದನು. ಬಕಪಕ್ಷಯ ಒಳ್ಳೆಯ ಗುಣವನ್ನು ನೆನೆದು ಅಮೃತಸಿಂಪಡಿಸಿ ಬದುಕಿಸಿದನು.
ಎಚ್ಚರವಾದ ಬಕನಿಗೆ ಏನು ವರ ಬೇಕು ಎಂದು ಕೇಳಿದಾಗ ನನ್ನಿಂದಾಗಿ ಗೌತಮ ಬ್ರಾಹ್ಮಣ ಸತ್ತನು ಅವನನ್ನು ಬದುಕಿಸಿ ಎಂದಿತು. ಬ್ರಾಹ್ಮಣನನ್ನು ಬದುಕಿಸಿದ. ಆತನು ಅಜ್ಞಾನದಿಂದಲೂ ಪಾಪ ಕರ್ಮದಿಂದಲೂ ಮೊದಲು ದುಷ್ಟನಾಗಿದ್ದವನು ಈಗ ಪುನರ್ಜನ್ಮ ಪಡೆದವರಂತೆ ಜ್ಞಾನಿಯಾಗಿ ನಾಳೀ ಜಂಘ ಬಕಪಕ್ಷಿಗೆ ನಮಸ್ಕರಿಸಿ ಉಗ್ರ ಸೇನನಲ್ಲಿ ತನ್ನ ಅಪರಾಧವನ್ನು ಮನ್ನಿಸುವಂತೆ ಬೇಡಿ ತಪಸ್ಸು ಮಾಡಲು ಕಾಡಿಗೆ ಹೊರಟನು.
ಇಂಥ ಉತ್ತಮ ಗುಣದ ನಾಳೀಜಂಘ ಬಕಪಕ್ಷಿಯ ಗುಣವನ್ನು ಪ್ರಜೆಗಳಿಂದ ಕೇಳಿದ್ದ ಇಂದ್ರದ್ಯುಮ್ನ ಮಹಾರಾಜ ಅಲ್ಲಿಗೆ ಬಂದನು ಮಹಾರಾಜನ ದರ್ಶನದಿಂದ ಬಕಪಕ್ಷಿಯ ಜನ್ಮದ ಶಾಪವಿಮೋಚನೆಯಾಗಿ ಮೊದಲಿನಂತೆ ಶಿವನ ಅನುಗ್ರಹದಿಂದ ಶಿವಗಣಗಳಲ್ಲಿ ಒಬ್ಬನಾಗಿ ಪರಮೇಶ್ವರನ ಕೈಲಾಸದಲ್ಲಿ ಸೇರಿದನು.
ಹೇಗೆ ಚಿನ್ನದ ಆಭರಣದಲ್ಲಿರುವ ರತ್ನವು ಅದರ ಆಕರ್ಷಣೆಯನ್ನು ಹೆಚ್ಚಿಸುತ್ತದೋ ಹಾಗೆಯೇ ಒಬ್ಬ ವಿವೇಕಿಯ ಸೌಂದರ್ಯವನ್ನು ಅವನ ಗುಣಗಳು ಹೆಚ್ಚಿಸುತ್ತದೆ.
ಬರಹ: ಆಶಾ ನಾಗಭೂಷಣ. ಸಂಗ್ರಹ: ನರಸಿಂಹಮೂರ್ತಿ ಬರಗೂರು. (ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
