ದೊಡ್ಡಬಳ್ಳಾಪುರ, (ನ.29): ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಲಾರಿ ಅಪಘಾತದಲ್ಲಿ ಮೃತ ಪಟ್ಟ ದ್ವಿಚಕ್ರ ವಾಹನ ಸವಾರರಿಗೆ ತಲಾ 25 ಲಕ್ಷ ನೀಡಲು ಬಿಬಿಎಂಪಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿ, ಕೈತೊಳೆದುಕೊಂಡಿದೆ.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ನೆಲಮಂಗಲ ಶಾಸಕ ಡಾ.ಶ್ರೀನಿವಾಸ ಮೂರ್ತಿ ಹಾಗೂ ಹುಲಿಕುಂಟೆ ಅಕ್ಕಪಕ್ಕದ ಗ್ರಾಮಸ್ಥರ ಆಕ್ರೋಶಕ್ಕೆ ಮಣಿದ ಬಿಬಿಎಂಪಿ ಅಧಿಕಾರಿಗಾಳದ ಎಇಇ ಪ್ರಸನ್ನ, ಎಸ್ ಇ ಪ್ರವೀಣ್ ಅವರು ಮೃತ ಯುವಕರ ಕುಟುಂಬಕ್ಕೆ ತಲಾ 25 ಲಕ್ಷ ನೀಡಲು ಸಮ್ಮತಿ ನೀಡಿದರು.
ನೆಲಮಂಗಲ ತಾಲೂಕಿನ ಮರಳುಕುಂಟೆ ಗ್ರಾಮದ ಮಹೇಶ್ (27ವರ್ಷ), ಮಾರುತಿ (24 ವರ್ಷ), ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ, ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಲಾರಿ ಅಪಘಾತ ನಡೆಸಿದ ಪರಿಣಾಮ, ಯುವಕರು ಸ್ಥಳದಲ್ಲಿಯೇ ಸಾವನಪ್ಪಿದ್ದರು.
ಈ ಕುರಿತಂತೆ ಎರಡು ತಾಲೂಕಿನ ಶಾಸಕರು, ಹುಲಿಕುಂಟೆ ಗ್ರಾಮದ ಅಕ್ಕಪಕ್ಕದ ಗ್ರಾಮಸ್ಥರು ಮೃತ ದೇಹಗಳನ್ನು ತೆರವು ಮಾಡಲು ಬಿಡದೆ ಪ್ರತಿಭಟನೆಗೆ ಕುಳಿತಿದ್ದರು.
ಈ ವೇಳೆ ಉಪವಿಭಾಗಾಧಿಕಾರಿ ತೇಜಸ್ ಕುಮಾರ್, ತಹಶೀಲ್ದಾರ್ ಮೋಹನಕುಮಾರಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ನಾಗರಾಜ್, ಸರ್ಕಲ್ ಇನ್ಸ್ಪೆಕ್ಟರ್ ಹರೀಶ್, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಜ್ಞಾನಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಸುಮಾರು ಆರು ಗಂಟೆಗಳ ನಂತರ ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಮೃತ ಯುವಕರ ಕುಟುಂಬಕ್ಕೆ ಪರಿಹಾರ ನೀಡಲು ಸಮ್ಮತಿ ನೀಡಿದರು.
ಸೋಮವಾರ ಮಧ್ಯರಾತ್ರಿ 1ಗಂಟೆಯಾದರೂ ಕೆಲವು ಯುವಕರು ಮೃತರಿಗೆ ತಲಾ 50 ಲಕ್ಷ ರೂ ಪರಿಹಾರ ನೀಡಬೇಕೆಂದು ಪಟ್ಟುಹಿಡಿದ್ದು, ಮೃತರ ಶವಗಳನ್ನು ತೆರವು ಮಾಡಲು ಬಿಡದ ಕಾರಣ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ, ಶವಗಳನ್ನು ತೆರವುಗೊಳಿಸಿದರು.
ಸಭೆಯ ನಂತರ ತೀರ್ಮಾನ: ಉಳಿದಂತೆ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕ ಎಂ.ಎಸ್.ಜಿ.ಪಿ ಬಂದ್ ಮಾಡುವ ವಿಚಾರದ ಕುರಿತಂತೆ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಶಾಸಕರ ನೇತೃತ್ವದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವ ಮಾತುಗಳು ಕೇಳಿಬಂದಿದ್ದು, ಕೆಲವೇ ದಿನಗಳಲ್ಲಿ ಎರಡು ತಾಲೂಕಿನ ಶಾಸಕರ ನೇತೃತ್ವದಲ್ಲಿ ಸಭೆ ನಡೆದು, ಅಂತಿಮ ತೀರ್ಮಾನ ಹೊರಬೀಳಲಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

