ದೊಡ್ಡಬಳ್ಳಾಪುರ, (ಡಿ.01): ದೊಡ್ಡಬಳ್ಳಾಪುರ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 18 ಮತ್ತು 19ರಂದು ತಾಲೂಕಿನ ಸಾಸಲು ಹೋಬಳಿ ಕೇಂದ್ರದಲ್ಲಿ ನಡೆಯಲಿದ್ದು, ಸಮ್ಮೇಳನವನ್ನು ಸಂಭ್ರಮದಿಂದ ನಡೆಸಲು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿವಿಧ ಇಲಾಖೆಗಳು ಅದರದೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸಮ್ಮೇಳನಕ್ಕೆ ಅಗತ್ಯ ಸಹಕಾರ ನೀಡಬೇಕಾಗುತ್ತದೆ. ಆಯಾ ಇಲಾಖೆಗಳ ಜನಸ್ನೇಹಿ ಯೋಜನೆಗಳ ಕುರಿತು ಮಾಹಿತಿ ನೀಡಲೂ ಇದೊಂದು ಉತ್ತಮ ವೇದಿಕೆಯಾಗಿದ್ದು, ತಾಲೂಕಿನಾದ್ಯಂತ ಹೆಚ್ಚಿನ ಪ್ರಚಾರದೊಂದಿಗೆ ಅರ್ಥಪೂರ್ಣವಾಗಿ ಆಯೋಜಿಸಲು ಸಹಕರಿಸಬೇಕು ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೇವಾದಳ, ಪ್ರೌಡಶಾಲಾ ಮಕ್ಕಳ ಸಹಭಾಗಿತ್ವವನ್ನು ಕಡ್ಡಾಯವಾಗವಾಗಿಸಿ. ಇನ್ನು ಇಲ್ಲಿನ ಹೋಬಳಿಯ ಧಾರ್ಮಿಕ ಇತಿಹಾಸ, ಜನಪದ ಇತಿಹಾಸವನ್ನು ಸಮ್ಮೇಳನದ ಮೂಲಕ ಪ್ರಚಾರಕ್ಕೆ ಬರುವ ಅಗತ್ಯ ಇದೆ ಎಂದು ತಿಳಿಸಿದರು.
ತಹಶೀಲ್ದಾರ್ ಮೋಹನಕುಮಾರಿ ಮಾತನಾಡಿ, ಬೆಂಗಳೂರು ವಿಶ್ವ ವಿದ್ಯಾಲಯ ಕನ್ನಡ ವಿಭಾಗ, ಕನ್ನಡ ಪುಸ್ತಕ ಪ್ರಾಧಿಕಾರಗಳನ್ನು ವಿಶೇಷವಾಗಿ ಬಳಸುಕೊಳ್ಳುವುದು, ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸುವ ಹಂತದಲ್ಲಿ ಅಧಿಕಾರಿಗಳ ಸಭೆಯೊಂದನ್ನು ನಡೆಸಲಾಗುವುದು ಎಂದರು.
ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಉಪಸಮಿತಿಗಳಲ್ಲಿ ಕನ್ನಡ ಸಂಘಟನೆಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಭಾಗಿತ್ವ ಮುಖ್ಯ. ಸಮ್ಮೇಳನ ಸ್ವರೂಪ ಮತ್ತು ರೂಪರೇಷೆಗಳು ಶಿಷ್ಟಾಚಾರದಂತೆ ರೂಪಗೊಳ್ಳಬೇಕು. ಈ ಹಂತದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಪೂರ್ಣ ಹೊಣೆಗಾರಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ವಿವಿಧ ವಿಚಾರಗಳ ಕುರಿತು ಚರ್ಚೆ: ಸಾಸಲು ಹೋಬಳಿಯಲ್ಲಿ ಪ್ರಥಮ ಭಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ಸಾಸಲು ಚಿನ್ನಮ್ಮನ ಇತಿಹಾಸದ ಮೂಲಕ ಸಮ್ಮೇಳನಕ್ಕೆ ಮತ್ತಷ್ಟು ಮೆರಗು ಸಿಕ್ಕುವಂತಾಗುತ್ತದೆ. ಒಂದು ದಿನಕ್ಕೆ ಸಮ್ಮೇಳನ ಸೀಮಿತಗೊಳ್ಳುವುದು ಉತ್ತಮ. ಯುವಜನ ಕೇಂದ್ರಿತ ವಿಚಾರಗೋಷ್ಠಿ, ಸಮ್ಮೇಳನ ನಿರ್ಣಯಗಳ ಅನುಷ್ಠಾನ ಇತ್ಯಾದಿ ವಿಚಾರಗಳ ಕುರಿತು ಸಲಹೆಗಳು ಕೇಳಿ ಬಂದವು.
ಸಮ್ಮೇಳನಾಧ್ಯಕ್ಷರಾಗಿ ಚಿನ್ನು ಪ್ರಕಾಶ್ ಆಯ್ಕೆ: ದೊಡ್ಡಬಳ್ಳಾಪುರ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಸಲು ಹೋಬಳಿಯ ಸಾಹಿತಿ-ಕಲಾವಿದ ಚಿನ್ನುಪ್ರಕಾಶ್ ಅವರನ್ನು ತಾಲೂಕು ಕಸಾಪ ಕಾರ್‍ಯಕಾರಿ ಸಮಿತಿ ಆಯ್ಕೆ ಮಾಡಿದೆ ಎಂದು ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಪ್ರಕಟಿಸಿದರು.
ಇದೇ ವೇಳೆ ಸಮ್ಮೇಳನಾಧ್ಯಕ್ಷರ ಪರಿಚಯ ಪತ್ರ ಹಾಗೂ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್‌ಗೌಡ, ಕಸಾಪ ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಸಂಘಟನೆಗಳ ಮುಖಂಡರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

