ದೊಡ್ಡಬಳ್ಳಾಪುರ, (ಡಿ.04): ನಗರದ ಟಿಬಿ ವೃತ್ತದಲ್ಲಿ ಪೊಲೀಸ್ ಇಲಾಖೆ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಕಾರ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿದ್ದು, ಬರಪೂರ ಸ್ಪಂದನೆ ವ್ಯಕ್ತವಾಗುತ್ತಿದೆ.

ನಗರದ ಟಿಬಿ ಸರ್ಕಲ್, ರೈಲ್ವೇ ಸ್ಟೇಷನ್, ಡಿಕ್ರಾಸ್ ವೃತ್ತದ ಬಳಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಎದುರಾಗಿ ವಾಹನ ಸವಾರರು ಪರದಾಡುವಂತಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಮೊದಲಿಗೆ ಟಿಬಿ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದರು.

ಸಿಗ್ನಲ್ ಇಲ್ಲದೆ ಬೇಕಾಬಿಟ್ಟಿಯಾಗಿ ವಾಹನ ಚಲಾವಣೆ ಮಾಡುತ್ತಿದ್ದ ಸವಾರರು, ಸಿಗ್ನಲ್ ಅಳವಡಿಕೆಯ ನಂತರ ಯಾವುದೇ ಸಿಬ್ಬಂದಿ ಸೂಚನೆ ಇಲ್ಲದೆಯೂ, ಸಿಗ್ನಲ್ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲಿಸುವ ಮೂಲಕ ಪೊಲೀಸರ ಕಾರ್ಯಕ್ಕೆ ಸ್ವಯಂ ಬೆಂಬಲ ನೀಡುತ್ತಿದ್ದಾರೆ.
ಈ ಯಶಸ್ಸು ಪೊಲೀಸರಿಗೆ ಮತ್ತಷ್ಟು ಹುರುಪಿಗೆ ಕಾರಣವಾಗಿದ್ದು, ರೈಲ್ವೇ ಸ್ಟೇಷನ್ ಸೇರಿದಂತೆ ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿದ್ದ, ನಗರ ವ್ಯಾಪ್ತಿಯ ಪ್ರಮುಖ ವೃತ್ತಗಳಲ್ಲಿ ಮತ್ತಷ್ಟು ಸಿಗ್ನಲ್ ಅಳವಡಿಸಲು ಮುಂದಾಗಿದ್ದಾರೆ.
ಈ ಕುರಿತಂತೆ ಹರಿತಲೇಖನಿಯೊಂದಿಗೆ ಮಾತನಾಡಿರುವ ಸರ್ಕಲ್ ಇನ್ಸ್ಪೆಕ್ಟರ್ ಹರೀಶ್, ಟಿಬಿ ವೃತ್ತದಲ್ಲಿ ಅಳವಡಿಸಿರುವ ಸಿಗ್ನಲ್ ಗೆ ವಾಹನ ಸವಾರರು ಉತ್ತಮವಾಗಿ ಸ್ಪಂದಿಸಿದ್ದಾರೆ. ಟಿಬಿ ವೃತ್ತದಲ್ಲಿ ವಾಹನಗಳ ನಿಲುಗಡೆಗೆ ಗೆರೆ ಎಳೆಯುವುದು. ಸೂಚನೆ ನೀಡಲು ಸಿಬ್ಬಂದಿ ನೇಮಕ, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ರೈಲ್ವೇ ಸ್ಟೇಷನ್ ಸೇರಿದಂತೆ ಮತ್ತಷ್ಟು ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಒಟ್ಟಾರೆ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿಗೆ ಬಸವಳಿಯುತ್ತಿದ್ದ ವಾಹನ ಸವಾರರು, ಪೊಲೀಸರ ಟ್ರಾಫಿಕ್ ಸಿಗ್ನಲ್ ಅಳವಡಿಕೆಯಿಂದ ನೆಮ್ಮದಿಯಿಂದ ಸಾಗುವಂತಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
