ದೊಡ್ಡಬಳ್ಳಾಪುರ, (ಏ.26): ಬಿಜೆಪಿ ತ್ಯಜಿಸಿ ಮತ್ತೆ ಮಾತೃಪಕ್ಷ ಜೆಡಿಎಸ್ ಸೇರ್ಪಡೆಯಾದ ಬೆನ್ನಲ್ಲೇ, ಚಿತ್ರ ನಿರ್ಮಾಪಕ ಸಾರಥಿ ಸತ್ಯಪ್ರಕಾಶ್ ಅವರು ಜೆಡಿಎಸ್ ಅಭ್ಯರ್ಥಿ ಬಿ.ಮುನೇಗೌಡರ ಪರ ಮತ ಬೇಟೆ ಆರಂಭಿಸಿದ್ದು, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದಾರೆ.
ಬೋವಿಪಾಳ್ಯ ಗ್ರಾಮದ ಹೊರವಲಯದಲ್ಲಿ ಸಾಸಲು ಮತ್ತು ದೊಡ್ಡಬೆಳವಂಗಲ ಹೋಬಳಿಯ ಮುಖಂಡರ ಸಭೆ ನಡೆಸಿರುವ ಸತ್ಯಪ್ರಕಾಶ್ ಅವರು, ತಾಲೂಕಿನ ನೆಮ್ಮದಿ ಕಸಿದ ಎಂಎಸ್‌ಜಿಪಿ ತ್ಯಾಜ್ಯ ಘಟಕ ಮುಚ್ಚಿಸಲು ಮತ್ತು ನಮ್ಮ ಮನೆಗಳ ಯುವಕರು ಕಗ್ಗೊಲೆಯಾಗುವುದನ್ನು ತಪ್ಪಿಸಲು ಜೆಡಿಎಸ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ತಾಲೂಕಿನ ಅನೇಕ ಗ್ರಾಮಗಳಲ್ಲಿ ನಿರ್ಮಾಣವಾಗಿರುವ ದೇವಸ್ಥಾನಗಳ ಕಲ್ಲುಗಳು ಮುನೇಗೌಡರ ಹೆಸರು ಹೇಳುತ್ತಿವೆ. ಆದರೆ ಆ ಪುಣ್ಯಾತ್ಮರು ಯಾವತ್ತೂ ನಾನು ಸಹಾಯ ಮಾಡಿದ್ದೇನೆ ಎಂದು ಹೇಳಿಕೊಳ್ಳಲಿಲ್ಲ. ಆದರೆ ಇಂದು ಎರಡು ರೂಪಾಯಿಯ ದಾನ ಮಾಡಿ, ಹತ್ತಾರು ರೂಪಾಯಿಯ ಪ್ರಚಾರ ಗಿಟ್ಟಿಸುವವರನ್ನು ಮತ್ತು ಎಂಎಸ್‌ಜಿಪಿ ಘಟಕದ ವಿರುದ್ಧದ ನಮ್ಮ ಹೋರಾಟವನ್ನು ಹತ್ತಿಕ್ಕಿ, ತ್ಯಾಜ್ಯ ಘಟಕ ಉಳಿಸಿಕೊಂಡು ನಮ್ಮ ನರಕಯಾತನೆಯನ್ನು ಮುಂದುವರಿಸಿದ ಶಾಸಕರನ್ನು ಮನೆಗೆ ಕಳಿಸುವುದೊಂದೇ ಗುರಿಯಾಗಬೇಕೆಂದು ಕಾರ್ಯಕರ್ತರಿಗೆ, ಮುಖಂಡರಿಗೆ ಸಾರಥಿ ಕರೆ ನೀಡಿದ್ದಾರೆಂದು ತಿಳಿದು ಬಂದಿದೆ.
ಈ ವೇಳೆ ಜಿಪಂ ಮಾಜಿ ಸದಸ್ಯ ಹೆಚ್.ಅಪ್ಪಯ್ಯಣ್ಣ, ನಗರಸಭೆ ನಾಮಿನಿ ಸದಸ್ಯ ಚಂದ್ರಶೇಖರ್, ಜೆಡಿಎಸ್ ಮಾಧ್ಯಮ ವಕ್ತಾರ ಕುಂಟನಹಳ್ಳಿ ಮಂಜುನಾಥ್, ಮುಖಂಡರಾದ ಕೆಸ್ತೂರು ರಮೇಶ್, ಅಶ್ವಥ್ ನಾರಾಯಣ್, ಜಿ.ಎನ್.ಪ್ರದೀಪ್, ಶ್ರೀನಿವಾಸ್ ಪಾಳೇಗಾರ್ ಭಾನುಪ್ರಕಾಶ್, ವೆಂಕಟೇಶ್, ಮುತ್ತುರಾಜ್, ಹೊನ್ನಾಘಟ್ಟ ಕೇಶವ ಮೂರ್ತಿ ಮತ್ತಿತರರಿದ್ದರು ಎನ್ನಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….