ದೊಡ್ಡಬಳ್ಳಾಪುರ: (ಏ.26): ಮೇ 10ರಂದು ನಡೆಯಲಿರುವ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ವತಿಯಿಂದ ಯಾವುದೇ ಪಕ್ಷಕ್ಕೆ ನಮ್ಮ ಸಂಘಟನೆಯಿಂದ ಬೆಂಬಲವಿಲ್ಲ. ಆದರೆ ಈ ಚುನಾವಣೆಯಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಮತದಾರರಿಗೆ ಭರವಸೆ ನೀಡಿ ನಂತರ ಜನರ ಮುಂದೆ ಹೋಗಿ ಎಂದು ಚುನಾವಣೆಯ ಅಭ್ಯರ್ಥಿಗಳನ್ನು ಒತ್ತಾಯಿಸಲಾಗುತ್ತಿದೆ ಎಂದು ಕರವೇ ಕನ್ನಡಿಗರ ಬಣದ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ.
ಈ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಪಕ್ಷಗಳು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಆದರೆ ಸಂಘಟನೆಯ ಪದಾಧಿಕಾರಿಗಳು ಸಭೆ ಸೇರಿ ಯಾವ ಪಕ್ಷಕ್ಕೂ ಬೆಂಬಲ ನೀಡಬಾರದೆಂದು ನಿರ್ಧರಿಸಿದ್ದೇವೆ.
ತಾಲೂಕಿನಲ್ಲಿ ಸರ್ಕಾರದ ಮಟ್ಟದಲ್ಲಿ ಹಾಗೂ ಸ್ಥಳೀಯ ಮಟ್ಟದಲ್ಲಿ ಶಾಸಕರಾದವರು ಬಗೆಹರಿಸಬೇಕಾದ ನಾನಾ ಸಮಸ್ಯೆಗಳಿವೆ. ಜಿಲ್ಲಾ ಕೇಂದ್ರಕ್ಕಾಗಿ ಒತ್ತಾಯಿಸಿ ಹೋರಾಟಗಳನ್ನು ನಡೆಸಿದ್ದರೂ ಇನ್ನೂ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಿಲ್ಲ.
ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡಕ್ಕೆ ಜಾಗ ನೀಡಿಲ್ಲ. ಹೊಸ ಬಸ್ ನಿಲ್ದಾಣ ಪಾಳು ಬಿದ್ದಿದ್ದು, ಇದನ್ನು ಅಭಿವೃದ್ದಿ ಪಡಿಸಿ ಅಂತರಾಜ್ಯ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯಕ್ಕೆ ಮನ್ನಣೆಯಿಲ್ಲ.
ನಗರದಲ್ಲಿನ ಜಿಲ್ಲಾ ಮಟ್ಟದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾದರೂ ಇನ್ನೂ ಇಲ್ಲಿ ನಿರ್ಮಾಣವಾಗಿಲ್ಲ. ಜಿಲ್ಲಾಸ್ಪತ್ರೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ನಗರದಲ್ಲಿ ರಸ್ತೆ ಅಗಲೀಕರಣ ಆಗಿಲ್ಲ.
ಉದ್ಯೋಗಸ್ಥ ಮಹಿಳೆಯರಿಗೆ ಸರ್ಕಾರದಿಂದ ವಸತಿ ಕಲ್ಪಿಸಬೇಕಿದೆ. ಗಾರ್ಮೆಂಟ್ಸ್ ಹಾಗೂ ಆಟೋ ಚಾಲಕರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಬೇಕಿದೆ.
ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಜಿಮ್ ಸ್ಥಾಪಿಸಬೇಕಿದೆ. ಗ್ರಾಮೀಣರಿಗೆ ಕಂಟಕವಾಗಿರುವ ಎಂಎಸ್‍ಜಿಪಿ ಘಟಕ ಮುಚ್ಚಿಸಬೇಕು. ಇದರಲ್ಲಿ ಹಲವಾರು ಸಮಸ್ಯೆಗಳು ಸ್ಥಳೀಯ ಶಾಸಕರಾದವರು ಬಗೆ ಹರಿಸಬಹುದಾಗಿದೆ.
ತಾಲೂಕಿಗೆ ಸಿಇಟಿ ಕೇಂದ್ರ, ಉಪವಿಭಾಗಾಧಿಕಾರಿಗಳ ಕಚೇರಿ ಬರಲು ಕರವೇ ಹೋರಾಟವೂ ಕಾರಣವಾಗಿದೆ. ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ ಚುನಾವಣೆಗೆ ತೆರಳಬೇಕೆಂದು ಕರವೇ ಒತ್ತಾಯಿಸುತ್ತದೆ ಎಂದರು.
ಸುದ್ಧಿಗೋಷ್ಟಿಯಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ತಾಲೂಕು ಯುವ ಘಟಕ ಅಧ್ಯಕ್ಷ ತ.ನ.ರಂಜಿತ್ ಗೌಡ, ಕಾರ್ಯಾಧ್ಯಕ್ಷ ಎಸ್.ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕಾರ್ತಿಕ್.ಆರ್., ಸಂಚಾಲಕ ಬಸವರಾಜು, ತಾಲೂಕು ಮಹಿಳಾ ಅಧ್ಯಕ್ಷೆ ಕೆ.ವಿ. ರಾಧಾಮಣಿ, ಉಪಾಧ್ಯಕ್ಷೆ ಎಚ್.ಕಮಲಾಕ್ಷಿ, ತಾಲೂಕು ಆಟೋ ಘಟಕದ ಅಧ್ಯಕ್ಷ ತನ್ವೀರ್, ಪದಾಧಿಕಾರಿಗಳಾದ ಸೈಯದ್ ಇರ್ಫಾನ್ , ರಾಜಶೇಖರ್, ವೀರಭದ್ರ, ಚಾಂದ್ ಪಾಷಾ, ನರೇಂದ್ರ, ವಾಸು, ದೊಡ್ಡೇಗೌಡ, ಅಸ್ಲಾಂ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….