ಬೆಂಗಳೂರು, (ಜೂ.25): ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬಣ್ಣ ಬಳಕೆಗೆ ನಿಷೇಧ ಹೇರಿದ್ದ ರಾಜ್ಯ ಆರೋಗ್ಯ ಇಲಾಖೆ ಇದೀಗ ಚಿಕನ್, ಫಿಶ್ ಸೇರಿದಂತೆ ಕಬಾಬ್ ತಯಾರಿಯಲ್ಲಿ ಕೃತಕ ಬಣ್ಣ ಬೆರೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಚಿಕನ್ ಕಬಾಬ್‌ಗಳಲ್ಲೂ ಕೃತಕ ಬಣ್ಣಗಳ ಬೆರಸುವಿಕೆಯಿಂದಾಗುವ ದುಷರಿಣಾಮಗಳ ಬಗ್ಗೆ ಪರೀಕ್ಷೆಗೊಳಪಡಿಸಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಹಾರ ಸುರಕ್ಷತಾ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದರು.
ಒಂದು ವೇಳೆ ಅನಧಿಕೃತವಾಗಿ ಕೃತಕ ಬಣ್ಣಗಳನ್ನು ಬಳಸಿಕೊಂಡರೆ ಆಹಾರ ಸುರಕ್ಷತೆ ಮತ್ತು ಗುಣ ಮಟ್ಟಕಾಯಿದೆ- 2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಶಿಕ್ಷೆಯ ತನಕ ಜೈಲು ಶಿಕ್ಷೆ ಮತ್ತು 10 ಲಕ್ಷ ರು. ತನಕ ದಂಡ ವಿಧಿಸಲಾಗು ವುದೆಂದು ಎಚ್ಚರಿಕೆ ನೀಡಲಾಗಿದೆ.
ಈ ಆದೇಶವು ಬೀದಿ ಬದಿಯ ತಳ್ಳು ಗಾಡಿ ವ್ಯಾಪಾರಿಗಳಿಂದ ಹಿಡಿದು ಪಂಚತಾರಾ ಹೋಟೆಲ್‌ವರೆಗೂ ಎಲ್ಲರಿಗೂ ಅನ್ವಯವಾಗಲಿದೆ. ಕಳೆದ ಮಾಚ್ ೯ನಲ್ಲಿ ಮಕ್ಕಳು ಹೆಚ್ಚಾಗಿ ಬಳಸುವ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ ಬಳಕೆ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು.
ಸಚಿವ ದಿನೇಶ್ ಗುಂಡೂರಾವ್ ಸೂಚನೆಯ ಮೇರೆಗೆ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಸಾರ್ವಜನಿಕರು ಹೋಟೆಲ್‌ಗಳಲ್ಲಿ ಮತ್ತು ಬೀದಿ ಬದಿಯಲ್ಲಿ ಮುಗಿಬಿದ್ದು ತಿನ್ನುವ ಕಬಾಬ್ ಆರೋಗ್ಯಕ್ಕೆ ಹಾನಿಕಾರಕವೆಂದು ಕಂಡು ಬಂದಿತ್ತು.
ವಿಶ್ಲೇಷಣೆಗೊಳಪಡಿಸಲಾದ ಮಾದರಿಗಳಲ್ಲಿ 08 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ 07 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 01) ಕೂಡಿದ್ದು ಕಂಡು ಬಂದಿತ್ತು.
ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಚಿಕನ್ ಕಬಾಬ್, ಫಿಶ್ ಕಬಾಬ್ ಸೇರಿದಂತೆ ಆಹಾರದಲ್ಲಿ ಕೃತಕ ಬಣ್ಣ ಬೆರಸುವಿಕೆಯನ್ನು ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ಬಣ್ಣದಲ್ಲಿರುವ ರೋಡಮೈನ್-ಬಿ ಅಥವಾ ಆರ್ ಎಚ್‌ಬಿ ಎಂಬ ರಾಸಾಯನಿಕವು ಆಹಾರದ ಮೂಲಕ ದೇಹ ಸೇರಿದರೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಬೇಕಾ ಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….