ದೊಡ್ಡಬಳ್ಳಾಪುರ, (ಆಗಸ್ಟ್.19): ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಲಕ್ಷಾಂತರ ರೂ ಖರ್ಚು ಮಾಡಿ, ಶ್ರಮ ಪಟ್ಟು ಉತ್ತಮ ಅಂಕಗಳನ್ನು ಪಡೆದರು ಅರ್ಹತೆಗೆ ತಕ್ಕ ಉದ್ಯೋಗ ದೊರಕುತ್ತಿಲ್ಲ ಎಂಬ ಆಕ್ರೋಶ ಯುವ ಸಮುದಾಯದ್ದಾಗಿದೆ. ಇದು ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾದರು, ವಿದ್ಯಾವಂತ ಯುವ ಸಮುದಾಯದ ಅಳಲು ಕೇಳುವವರು ಯಾರು ಎಂಬ ಪ್ರಶ್ನೆ ಕಾಡುವಂತಾಗಿದೆ.
ಇದಕ್ಕೆ ಪೂರಕವೆಂಬಂತೆ ಕಷ್ಟಪಟ್ಟು ಓದಿ, ಉನ್ನತ ವ್ಯಾಸಂಗ ಮಾಡಿದರು ಉದ್ಯೋಗ ಸಿಗದ ಕಾರಣ ಬೇಸತ್ತ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ನಗರದ ವಿದ್ಯಾನಗರದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಮೃತ ಯುವಕನನ್ನು 29 ವರ್ಷದ ಭರತ್ ಕುಮಾರ್ ಎಂದು ಗುರುತಿಸಲಾಗಿದ್ದು, ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ 7 ವರ್ಷ ಕಳೆದರು ಅರ್ಹತೆಗೆ ತಕ್ಕ ಉದ್ಯೋಗ ಸಿಗದ ಕಾರಣ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತನ ತಂದೆ ನಿಧನ ಹೊಂದಿದ್ದು, ಅಕ್ಕ ಮತ್ತು ತಾಯಿಯೊಂದಿಗೆ ವಿದ್ಯಾನಗರದಲ್ಲಿ ವಾಸವಿದ್ದ ಎನ್ನಲಾಗಿದೆ. ಭಾನುವಾರ ಬೆಂಗಳೂರಿನಲ್ಲಿ ಸಂಬಂಧಿಕರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಕ್ಕ ಮತ್ತು ತಾಯಿ ತೆರಳಿದ್ದ ವೇಳೆ ಭರತ್ ಕುಮಾರ್ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾವಿಗೂ ಮುನ್ನ ಡೆತ್ ನೋಟ್ ಬರೆದಿರುವ ಭರತ್ ಕುಮಾರ್, ನನ್ನ ಸಾವಿಗೆ ಯಾರು ಕಾರಣರಲ್ಲ, ನನ್ನ ಸಾವಿಗೆ ನಾನೆ ಕಾರಣ, ನಾ ಯಶಸ್ವಿಯಾಗದವ (No one is Responsible for My Death. I am Solely Responsible I am a big failure) ಎಂದು ಬರೆದಿಟ್ಟಿದ್ದಾರೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….