ದೊಡ್ಡಬಳ್ಳಾಪುರ, (ಆಗಸ್ಟ್.19); ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ ‘ಭೀಮ’ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಸಕ್ಸಸ್ ತಂದುಕೊಟ್ಟಿದೆ. ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾ ಬಿ ಮತ್ತು ಸಿ ಸೆಂಟರ್‌ಗಳಲ್ಲಿ ದೊಡ್ಡ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೊದಲ ದಿನದಿಂದಲೇ ವಿಜಯ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡುತ್ತಿದೆ.
‘ಭೀಮ’ ಸಿನಿಮಾ ಮಾದಕ ವ್ಯಸನಿಗಳಾಗಿರುವ ಯುವಕರನ್ನು ಇಟ್ಟುಕೊಂಡು ಹೆಣೆಯಲಾಗಿದ್ದ ಕಥೆ. ಬೆಂಗಳೂರಿನ ಏರಿಯಾಗಳಲ್ಲಿ ಡ್ರಗ್ಸ್ ಮಾಫಿಯಾ ಹೇಗಿದೆ? ಯಾವ್ಯಾವ ಏರಿಯಾಗಳಲ್ಲಿ ಈ ದಂಧೆ ಹೇಗೆ ನಡೆಯುತ್ತೆ? ಮೆಡಿಕಲ್ ಸ್ಟೋರ್ ಗಳಲ್ಲಿ ದೊರೆಯುವ ಔಷಧಿಗಳ ದುರ್ಬಳಕೆಯ ಕುರಿತು ದುನಿಯಾ ವಿಜಯ್ ಮತ್ತು ಅವರ ತಂಡ ಈ ಸಿನಿಮಾದಲ್ಲಿ ಹಸಿ ಬಿಸಿಯಾಗಿ ತೋರಿಸಿದೆ. ಹೀಗಾಗಿ ಬಿ ಮತ್ತು ಸಿ ಸೆಂಟರ್‌ಗಳಲ್ಲಿರುವ ಯುವಕರನ್ನು ಈ ಸಿನಿಮಾ ಸೆಳೆಯುತ್ತಿದೆ.
ಅಲ್ಲದೆ ಮೆಡಿಕಲ್ ಸ್ಟೋರ್ ಗಳಲ್ಲಿ ದೊರೆಯುವ ಔಷಧಿಗಳನ್ನು ಮಾದಕವಸ್ತುವಾಗಿ ಯುವಕರು ಬಳಸುತ್ತಿರುವುದು, ಹಣದ ಆಸೆಗೆ ವೈದ್ಯರ ಚೀಟಿ ಇಲ್ಲದೆ ಕೆಲ ಮೆಡಿಕಲ್ ಸ್ಟೋರ್ ಅವರು ಔಷಧಿ ನೀಡುವುದರ ಕುರಿತು ದುನಿಯಾ ವಿಜಯ್ ಸ್ಟ್ರಿಂಗ್ ಆಪರೇಷನ್ ಮೂಲಕ ಪತ್ತೆಹಚ್ಚಿದ್ದಾರೆ.
ಇದರ ಬೆನ್ನಲ್ಲೇ ದೊಡ್ಡಬಳ್ಳಾಪುರದಲ್ಲಿ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಸುದ್ದಿಗೋಷ್ಠಿ ಕರೆಯಲಾಗಿದ್ದು, ತಜ್ಞ ವೈದ್ಯರ ಸಲಹಾ ಚೀಟಿ ಇಲ್ಲದೆ ಯಾವುದೇ ಔಷಧಗಳನ್ನಾಗಲಿ, ರೋಗ ನಿರೋಧಕ ಮಾತ್ರೆಗಳನ್ನಾಗಲಿ ಸಾರ್ವಜನಿಕರಿಗೆ ನೀಡಬಾರದು ಎಂದು ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಸೂಚನೆ ನೀಡಿ ಅಚ್ಚರಿ ಮೂಡಿಸಿದೆ.
ಈ ವೇಳೆ ಮಾತನಾಡಿರುವ ಪದಾಧಿಕಾರಿಗಳು ಕೆಲವೊಂದು ಔಷಧಿಗಳನ್ನು ಹೊರತು ಹಳೇಯ ದಿನಾಂಕ ಇರುವ ಚೀಟಿಗಳನ್ನು ನೋಡಿಯು ಸಹ ಔಷಧಿ ನೀಡುವಂತಿಲ್ಲ ಎನ್ನುವ ನಿಯಮವನ್ನು ಎಲ್ಲಾ ಔಷಧಿ ಮಾರಾಟಗಾರರು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯವಾಗಿದೆ ಎಂದಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದ ನಂತರ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಔಷಧಿ ಅಂಗಡಿಗಳಿಗೆ ದಿಢೀರ್ ಭೇಟಿ ವೇಳೆ ನಿಯಮ ಮೀರಿದ್ದು ಕಂಡು ಬಂದರೆ ಕಠಿಣ ಶಿಸ್ತು ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಭ್ರೂಣ ಹತ್ಯೆ ಸೇರಿದಂತೆ ಡೆಂಗ್ಯು ಜ್ವರ ಇತರೆ ಪ್ರಕರಣಗಳನ್ನು ತಡೆಗಟ್ಟುವಲ್ಲಿಯೂ ಔಷಧ ವ್ಯಾಪಾರಿಗಳ ಪಾತ್ರ ಪ್ರಮುಖವಾಗಿದೆ. ಎಂಟಿಪಿ ಕಿಟ್, ಎನ್ಡಿಪಿಎಸ್ ಹಾಗೂ ರೋಗ ನಿರೋಧ ಔಷಧಿಗಳನ್ನು ತಜ್ಞ ವೈದ್ಯರ ಅನುಮತಿ ಇಲ್ಲದೇ ನೀಡುವಂತೆಯೇ ಇಲ್ಲ.
ಗ್ರಾಹಕರು ಸಹ ವೈದ್ಯರ ಸಲಹೆ ಮೇರೆಗೆ ಔಷಧಿ ಖರೀದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಾಲ್ಲೂಕಿನಲ್ಲಿ 150 ಔಷಧಿ ಅಂಗಡಿಗಳು ಇವೆ. ಪ್ರತಿ ತಿಂಗಳು ನಡೆಯುವ ಮಾಸಿಕ ಸಭೆಯಲ್ಲಿ ಸರ್ಕಾರದ ನಿಯಮಗಳು ಹಾಗೂ ಆಯಾ ಸಂದರ್ಭಕ್ಕೆ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರಿಂದ ಬರುವ ಸೂಚನೆಗಳ ಬಗ್ಗೆಯು ಎಲ್ಲರಿಗು ಮಾಹಿತಿ ನೀಡಲಾಗುತ್ತಿದೆ.
ಸರ್ಕಾರದ ನಿಯಮಗಳು ಆನ್ ಲೈನ್ ಮೂಲಕ ಔಷಧಿ ಮಾರಾಟ ಮಾಡುವವರಿಗು ಅನ್ವಯಿಸಬೇಕಿದೆ. ಕೆಲವೊಂದು ಔಷಧಿಗಳನ್ನು ಸ್ವಚ್ಛ ಹಾಗೂ ತಂಪನೆಯ ವಾತಾವರಣದಲ್ಲಿ ಸಂರಕ್ಷಣೆ ಮಾಡಬೇಕು.
ಈ ನಿಯಮಗಳು ಆನ್ ಲೈನ್ ಮೂಲಕ ಔಷಧಿ ಮಾರಾಟ ಮಾಡುವವರು ಕಡ್ಡಾಯವಾಗಿ ಪಾಲಿಸುವಂತೆ ಮಾಡಬೇಕಿದೆ. ಜನರಿಕ್ ಔಷಧಿ ಮಳಿಗೆಯಲ್ಲಿ ಸರ್ಕಾರ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಔಷಧಿಗಳ ಹೊರತು ಇತರೆ ಔಷಧಿಗಳನ್ನು ಮಾರಾಟ ಮಾಡದಂತೆಯು ನಿಯಮ ಜಾರಿಗೆ ತರಲು ಆಗ್ರಹಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….