ಬೆಂಗಳೂರು: ಚಿತ್ರದುರ್ಗದ ವ್ಯಕ್ತಿಯೋರ್ವನ ಹತ್ಯೆ ಆರೋಪಕ್ಕೆ ಸಂಬಂಧಿಸಿದ ನಟ ದರ್ಶನ್ ( Darshan ) ಸೇರಿದಂತೆ 15 ಜನ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ (ಸೆ.30,ಸೋಮವಾರಕ್ಕೆ) ಅಂತ್ಯವಾಗಲಿದೆ.
ಕಳೆದ ಸೆ.17 ರಂದು ನ್ಯಾಯಾಂಗ ಬಂಧನ ಅವಧಿ ಮುಕ್ತಾಯದ ಬಳಿಕ ಎಲ್ಲ ಆರೋಪಿಗಳನ್ನು ವಿಡಿಯೊ ಕಾನ್ಸರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಸರ್ಕಾರಿ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳ ಅರ್ಜಿಯನ್ನು ನ್ಯಾಯಾಲಯ ಮತ್ತೆ 14ದಿನಗಳ ಕಾಲ ಮುಂದೂಡಿತ್ತು. ಸೋಮವಾರ ಎಲ್ಲ ಆರೋಪಿಗಳ ಜಾಮೀನು ಮತ್ತು ನ್ಯಾಯಾಂಗ ಬಂಧನದ ಅರ್ಜಿ ವಿಚಾರಣೆಯಾಗಲಿದೆ.
ಸುಮಾರು ಮೂರುವರೆ ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಜಾಮೀನು ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.
ದಸರಾ ಹಬ್ಬದಲ್ಲಿ ಅಭಿಮಾನಿಗಳು ದರ್ಶನ್‌ಗೆ ಜಾಮೀನು ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.
ಈಗಾಗಲೇ ನ್ಯಾಯಾಲಯಕ್ಕೆ ಮಧ್ಯಂತರ ಜಾಮೀನು ಸಲ್ಲಿಸಿದ್ದ ದರ್ಶನ್ ಅರ್ಜಿಯನ್ನು ಸೆ.27ಕ್ಕೆ ನ್ಯಾಯಾಲಯ ಮುಂದೂಡಿತ್ತು.
ಪ್ರಕರಣದಲ್ಲಿನ ಎ15, 16 ಮತ್ತು 17ನೇ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿರುವುದರಿಂದ ನಟ ದರ್ಶನ್, ಗೆಳತಿ ಪವಿತ್ರಾ ಸೇರಿದಂತೆ ಇತರೆ ಆರೋಪಿಗಳಿಗೆ ಜಾಮೀನು ದೊರೆಯಲಿದೆ ಎಂಬ ನಿರೀಕ್ಷೆ ಇದೆ.