ದೊಡ್ಡಬಳ್ಳಾಪುರ: ಪಿತೃಪಕ್ಷದ ಮಹಾಲಯ ಅಮಾವಾಸ್ಯೆ ಅ.2 ರಂದು ಆಚರಿಸಲಾಗುತ್ತಿದೆ. ಆದರೆ, ಅದೇ ದಿನ ಗಾಂಧಿ ಜಯಂತಿ ಕೂಡ ಆಗಿರುವುದರಿಂದ ಮಾಂಸ ಹಾಗೂ ಮದ್ಯ ಮಾರಾಟವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ದೊಡ್ಡಬಳ್ಳಾಪುರ ನಗರಸಭೆ ನಿಷೇಧಿಸಿದೆ. ಇದರಿಂದಾಗಿ ಹಿರಿಯರ ಪೂಜೆಗೆ ಮದ್ಯ ಮತ್ತು ಮಾಂಸವನ್ನು ಇಟ್ಟು ಪೂಜಿಸುವವರಿಗೆ ತೊಡಕಾಗಲಿದೆ.
ಮಹಾಲಯ ಅಮಾವಾಸ್ಯೆ ಮತ್ತು ಗಾಂಧಿ ಜಯಂತಿಯ ದಿನ ಬಂದಿರುವ ಕಾರಣ, ಆ ದಿನ ಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವಿ ವಿ ಸತ್ಯನಾರಾಯಣ ಹಾಗೂ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕಯ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ ನಿಗದಿ ಆಗಿರುವುದರಿಂದ ಅಂದು ಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
ಆದಾಗ್ಯೂ ಜಿಲ್ಲಾಡಳಿತ ಹಾಗೂ ನಗರಸಭೆ ನಿಷೇಧಿಸಿದ್ದು, ಪಿತೃಪಕ್ಷಕ್ಕೆ ಹಿರಿಯರಿಗೆ ಮಾಂಸ, ಮದ್ಯ ಇಟ್ಟು ಪೂಜಿಸುವವರು ತೊಂದರೆಗೆ ಒಳಗಾಗುವಂತೆ ಮಾಡಿದೆ.
ಭದ್ರತೆಗೆ ಮನವಿ; ಗಾಂಧಿ ಜಯತಿ ಪ್ರಯುಕ್ತ, ನಗರದಲ್ಲಿ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಈ ಸಂಬಂಧ ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮಕೈಗೊಳ್ಳ ಬೇಕೆಂದು ನಗರಸಭೆ ಪೌರಾಯುಕ್ತ ಕಾರ್ತಿಕ್ ಈಶ್ವರ್ ಅವರು ನಗರ ಠಾಣೆ ಪೊಲೀಸರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.