ದೆಹಲಿ: ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬೆರೆಸಿದ ತುಪ ಬಳಸಲಾಗಿದೆ ಎಂಬ ಆರೋಪ ಸಂಬಂಧ ವಿಚಾರಣೆ ನಡೆಸಲು ಸೋಮವಾರ ಆರಂಭಿಸಿದ ಸುಪ್ರೀಂ ಕೋರ್ಟ್ ‘ಕನಿಷ್ಠ ದೇವರನ್ನಾದರೂ ರಾಜಕೀಯದಿಂದ ಹೊರಗಿಡಿ’ ಎಂದು ಬೇಸರದಿಂದ ಹೇಳಿದೆ.
ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬೆರೆತ ತುಪ್ಪ ಬಳಸಲಾಗಿದೆ ಎಂದು ಮಾಧ್ಯಮದೆದುರು ನೇರ ಆರೋಪ ಮಾಡಿದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ನಡೆಗೆ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಾಲಯದ ಮೇಲ್ವಿಚಾರಣೆಯಲ್ಲೇ ತಿರುಪತಿ ಲಡ್ಡು ವಿವಾದ ತನಿಖೆ ಆಗಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾ. ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ‘ಲ್ಯಾಬ್ ವರದಿ ನೋಡಿದರೆ ಪ್ರಾಥಮಿಕವಾಗಿ ತಿರಸ್ಕೃತಗೊಂಡಿದ್ದ ತುಪ್ಪದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿರುವಂತೆ ಕಾಣಿಸುತ್ತದೆ. ಈ ಕಲಬೆರಕೆ ತುಪ್ಪವನ್ನೇ ಪ್ರಸಾದ ತಯಾರಿಸಲು ಬಳಸಲಾಗಿದೆ ಎಂಬುದಕ್ಕೆ ಯಾವ ಸಾಕ್ಷಿ ಇದೆ?’ ಎಂದು ಪ್ರಶ್ನಿಸಿದೆ.
ಲಡ್ಡುಗೆ ಕಲಬೆರಕೆ ತುಪ್ಪ ಬಳಕೆ ಮತ್ತು ಹಿಂದಿನ ವೈಎಸ್ ಜಗನ್ ರೆಡ್ಡಿ ಸರಕಾರದ ಅವಧಿಯಲ್ಲಿ ತಿರುಪತಿ ತಿರುಮಲ ದೇಗುಲದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆಗಾಗಿ ರಾಜ್ಯ ಸರಕಾರ ರಚಿಸಿದ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆ ಮುಂದುವರೆಸಬಾರದು ಎಂದೂ ಪೀಠ ಸೂಚನೆ ನೀಡಿದೆ.
ಆ ಮೂಲಕ ಹೊಸದಾಗಿ ಎಸ್‌ಐಟಿ ರಚಿಸಿ ತನಿಖೆಗೆ ವಹಿಸುವ ಸೂಚನೆ ನೀಡಿದೆ. ಈ ವಿಚಾರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರಿಗೆ ಕೇಂದ್ರದಿಂದ ನಿರ್ದೇಶನ ಪಡೆಯುವಂತೆ ಸೂಚಿಸಲಾಗಿದೆ. ಬಳಿಕ ಪೀಠ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.
ಸಿಎಂ ನಡೆಗೆ ಅಸಮಾಧಾನ: ತಿರುಪತಿ ಲಡ್ಡು ಪ್ರಸಾದದಲ್ಲಿ ಕಳಪೆ ತುಪ್ಪ ಬಳಕೆಯಾಗಿಲ್ಲ ಎಂದಾದಲ್ಲಿ ಇಡೀ ವಿವಾದವೇ ಸುಳ್ಳಾಗುತ್ತದೆ. ಜನರ ನಂಬಿಕೆ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿದೆ.
ಇಂತಹ ವಿಚಾರದಲ್ಲಿ ರಾಜಕೀಯ ಸಲ್ಲ. ಖಚಿತ ಮಾಹಿತಿ ಇಲ್ಲದೇ, ತನಿಖೆಯೂ ಆಗದೇ ಮಾಧ್ಯಮದೆದುರು ಹೇಳಿಕೆ ನೀಡುವ ಅಗತ್ಯವೇನಿತ್ತು? ಎಂದು ಆಂಧ್ರ ಪ್ರದೇಶ ಸರಕಾರದ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೊಡ್ಡಗಿ ಅವರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಕೋಟ್ಯಂತರ ಜನರ ನಂಬಿಕೆಗೆ ಸಂಬಂಧಿಸಿದ ವಿಚಾರಗಳಲ್ಲಿ ಆರೋಪ ಮಾಡುವಾಗ ಸೂಕ್ಷ್ಮತೆ ಇರಬೇಕು ಎಂದೂ ಹೇಳಿದೆ.