ದೊಡ್ಡಬಳ್ಳಾಪುರ; ತಾಲೂಕಿನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ಮಧುರೆ ಹೋಬಳಿಯ ಕೆಂಜಿಗನಹಳ್ಳಿ ಶಾಲೆ ಆವರಣಕ್ಕೆ ನೀರು ನುಗ್ಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುವಂತಾಗಿತ್ತು.
ಚಂಡಮಾರುತದ ಪರಿಣಾಮವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಪರಿಸ್ಥಿತಿ ಮುಂದುವರಿದಿದೆ. ಕರಾವಳಿ, ಮಲೆನಾಡಿನಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ಹಿಂಗಾರು ಮಳೆಯ ಅಬ್ಬರದಿಂದ ಜನಜೀವನ ಅಸ್ತ ವ್ಯಸ್ತವಾಗಿದೆ.
ಅಂತೆಯೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳೆದ ಸೋಮವಾರದಿಂದ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದ್ದು, ರಾಗಿ ಜೋಳದ ಬೆಳೆಗಳು ನೆಲ ಕಚ್ಚಲಾರಂಭಿಸಿವೆ.
ಮಳೆಯ ಕಾರಣ ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾತ್ರ ರಜೆ ಘೋಷಿಸಲಾಗಿದ್ದು, ಸತತ ಮಳೆಯಾಗುತ್ತಿದ್ದರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸದ ಕಾರಣ ವಿದ್ಯಾರ್ಥಿಗಳು ಶಿಕ್ಷಕರು ಮಳೆಯಲ್ಲಿಯೇ ಪರದಾಡಬೇಕಿದೆ.
ಮಂಗಳವಾರ ಮಧ್ಯಾಹ್ನ ಸುರಿದ ಧಾರಾಕಾರ ಮಧುರೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಕೆಂಜಿಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಮಳೆ ನೀರು ಹರಿದಿದ್ದು, ಶಾಲೆಯ ಕಟ್ಟಡ ಒಳಗೆ ನೀರು ನುಗ್ಗುವ ಆತಂಕ ವಿದ್ಯಾರ್ಥಿಗಳಿಗೆ ಎದುರಾಗಿತ್ತು.
ದೊಡ್ಡಬಳ್ಳಾಪುರ ತಾಲೂಕಿನ ಆನೇಕ ಶಾಲೆಗಳ ಕಟ್ಟಡಗಳು ಶಿಥಿಲವಾಗಿದ್ದು, ಮಳೆಯಿಂದ ಸೋರಲಾರಂಭಿಸಿವೆ. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆಯ ಮೂಲೆಯಲ್ಲಿ ಕುಳಿತುಕೊಳ್ಳುವ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಉಳಿದಂತೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಸೋಮವಾರ ರಾತ್ರಿ 72.05 ಮಿ.ಮೀ ದಾಖಲೆ ಮಳೆ ಸುರಿದಿದ್ದು, ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದ ರೈತರನ್ನು ಸಂಕಷ್ಟಕ್ಕೆ ಒಳಾಗಗುವಂತೆ ಮಾಡಿದ್ದು, ಹೂವಿನ ತೋಟಗಳಿಂದ ನೀರನ್ನು ಹೊರಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಇನ್ನೂ ಗುಡುಗು, ಸಿಡಿಲಿನ ಜೊತೆ ದೊಡ್ಡಬಳ್ಳಾಪುರ ತಾಲೂಕಿನ ಧಾರಾಕಾರವಾಗಿ ಮಳೆ ಕಸಬಾ ಹೋಬಳಿಯಲ್ಲಿ 53.07 ಮಿ.ಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 33.05 ಮಿ.ಮೀ, ಮಧುರೆ ಹೋಬಳಿಯಲ್ಲಿ 32.05 ಮಿ.ಮೀ ಹಾಗೂ ಸಾಸಲು ಹೋಬಳಿಯಲ್ಲಿ 34.08 ಮಿ.ಮೀ ಒಟ್ಟು 46.14 ಮಿ.ಮೀ ದಾಖಲಾಗಿದೆ.