ಪತ್ತನಂತಿಟ್ಟ: ಇಂದಿನಿಂದ ಕೆರಳದ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ಮಂಡಲ ಪೂಜೆ, ದರ್ಶನ ಆರಂಭವಾಗಿದೆ.
ಇಂದು ಶುಕ್ರವಾರ ಸಂಜೆ 4 ಗಂಟೆಗೆ ದೇವಸ್ಥಾನದ ಅರ್ಚಕರಾದ ಕಂದರಾರು ರಾಜೀವ್ ಮತ್ತು ಕಂದರಾರು ಬ್ರಹ್ಮದತ್ತನ ಸಮ್ಮುಖದಲ್ಲಿ ಪ್ರಧಾನ ಅರ್ಚಕರಾದ ಪಿ.ಎನ್.ಮಹೇಶ್ ನಂಬೂತಿರಿ ಅವರು ಶಾಸ್ತ್ರೋಕ್ತವಾಗಿ ದೇವಾಲಯದ ಬಾಗಿಲು ತೆರೆದರು.
#WATCH | Sabarimala temple opens for devotees, marking the beginning of the annual pilgrimage season
— ANI (@ANI) November 15, 2024
The sacred Sabarimala temple, dedicated to Lord Ayyappa opens today to mark the start of the annual Mandala-Makaravilakku festival pic.twitter.com/NNo9Gakp1W
ಮೊದಲ ದರ್ಶನಕ್ಕಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು, ನೂತನವಾಗಿ ನೇಮಕಗೊಂಡಿರುವ ಪ್ರಧಾನ ಅರ್ಚಕರಾದ ಅರುಣ್ ಕುಮಾರ್ ನಂಬೂತಿರಿ ಮತ್ತು ವಾಸುದೇವನ್ ನಂಬೂತಿರಿ ಅವರು ಮೊದಲಿಗೆ 18 ಮೆಟ್ಟಿಲುಗಳನ್ನು ಹತ್ತಿದರು. ನಂತರ ಭಕ್ತರು 18 ಮೆಟ್ಟಿಲು ಹತ್ತಿ ಅಯ್ಯಪ್ಪನ ದರ್ಶನ ಪಡೆದರು.
ನಾಳೆ ಶನಿವಾರದಿಂದ ಪ್ರತಿದಿನ ದೇವಸ್ಥಾನ ಬಾಗಿಲನ್ನು ಬೆಳಗ್ಗೆ 3 ಗಂಟೆಗೆ ತೆರೆಯಲಾಗುತ್ತದೆ ಮತ್ತು ಮಧ್ಯಾಹ್ನ 1 ಗಂಟೆಗೆ ಮುಚ್ಚಲಾಗುತ್ತದೆ, ನಂತರ ಮಧ್ಯಾಹ್ನ 3 ಗಂಟೆಗೆ ಮತ್ತೆ ಬಾಗಿಲು ತೆರೆದು, ರಾತ್ರಿ 11 ಗಂಟೆಗೆ ಮುಚ್ಚಲಾಗುತ್ತದೆ.
ಬೆಳಗ್ಗೆ 3.30ಕ್ಕೆ ತುಪ್ಪದ ಅಭಿಷೇಕ ಆರಂಭವಾಗಲಿದ್ದು, 7.30ಕ್ಕೆ ಬೆಳಗ್ಗೆ ಪೂಜೆ ಹಾಗೂ 12.30ಕ್ಕೆ ಮಧ್ಯಾಹ್ನದ ಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ದೀಪಾರಾಧನೆ ನಡೆಯಲಿದ್ದು, ರಾತ್ರಿ 9.30ಕ್ಕೆ ಕೊನೆಯ ಪೂಜೆ(ಅತ್ತಾಳ ಪೂಜೆ) 11 ಗಂಟೆಗೆ ನೆರವೇರಲಿದೆ. 18 ಗಂಟೆಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ಇರುತ್ತದೆ.
ಮಂಡಲ ಪೂಜೆಯನ್ನು ಡಿಸೆಂಬರ್ 26 ರಂದು ನಿಗದಿಪಡಿಸಲಾಗಿದ್ದು, ಅಂದು ರಾತ್ರಿ 10 ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ನಂತರ ಡಿಸೆಂಬರ್ 30 ರಂದು ದೇವಸ್ಥಾನದ ಬಾಗಿಲು ತೆರೆಯಲಿದೆ. ಮುಂದಿನ ವರ್ಷ ಜನವರಿ 14 ರಂದು ಮಕರ ಜ್ಯೋತಿ ಕಾಣಲಿದೆ. ನಂತರ ಜನವರಿ 20ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ.
ದೇವಸ್ಥಾನ ಆಡಳಿತ ಮಂಡಳಿ ಪ್ರತಿದಿನ 80 ಸಾವಿರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದೆ. 70 ಸಾವಿರ ವರ್ಚುಯಲ್ ಕ್ಯೂ ಬುಕಿಂಗ್ ಮತ್ತು 10 ಸಾವಿರ ಸ್ಪಾಟ್ ಬುಕಿಂಗ್ಗೆ ಅವಕಾಶ ಇದೆ.
ನಿಲಕ್ಕಲ್‌ನಲ್ಲಿ 8 ಸಾವಿರದಿಂದ 10 ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ನಿಲಕ್ಕಲ್‌ನಲ್ಲಿ 17,000 ಚದರ ಅಡಿ ಟೆಂಟ್ ಹಾಕಲಾಗಿದ್ದು, 2,700 ಜನ ಇಲ್ಲಿ ವಿಶ್ರಾಂತಿ ಪಡೆಯಬಹುದು.
ನಿಲಕ್ಕಲ್, ಪಂಪಾದಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಶಬರಿಮಲೆ ಹತ್ತುವ ಭಕ್ತರಿಗೆ ನೀರು ಮತ್ತು ತಿಂಡಿ ವಿತರಿಸಲಾಗುತ್ತದೆ, ಮರಕ್ಕೂಟಂನಿಂದ ಬೆಟ್ಟ ಹತ್ತುವ ಭಕ್ತರು ಕುಳಿತು ವಿಶ್ರಾಂತಿ ಪಡೆಯಲು ಸಾವಿರ ಸ್ಟೀಲ್ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.
ಒಟ್ಟು 132 ಕೇಂದ್ರಗಳಲ್ಲಿ ವಿಶ್ರಾಂತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.