ದೊಡ್ಡಬಳ್ಳಾಪುರ: ನಗರ ಪ್ರತಿಷ್ಠಿತ MSV ಪಬ್ಲಿಕ್ ಶಾಲೆಯಲ್ಲಿ ಇಂದು (ಶನಿವಾರ) ಶಾಲಾ ವಾರ್ಷಿಕ ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ದೊಡ್ಡಬಳ್ಳಾಪುರ ಶಾಖೆಯ ವ್ಯವಸ್ಥಾಪಕ ಸಂಜಯ ಕುಮಾರ್ ಸಿಂಗ್ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಮಾನಸಿಕ ಆರೋಗ್ಯ ಉತ್ತಮವಾಗಿರಬೇಕಾದರೆ ದೈಹಿಕ ಸದೃಢತೆ ಬಹಳ ಮುಖ್ಯ. ಮಾನಸಿಕವಾಗಿ ಕುಗ್ಗಿರುವಂತಹ ಜೀವಗಳಿಗೆ ದೈಹಿಕ ಚಟುವಟಿಕೆಗಳು ಚೇತರಿಕೆ ಉಂಟು ಮಾಡುತ್ತವೆ ಎಂದರು.
ಪಾಠದ ಜೊತೆ ಆಟವೂ ಮುಖ್ಯ. ಕಲಿಯುವಿಕೆಯಲ್ಲಿ ಮತ್ತು ಆಟದಲ್ಲಿ ಭಾಗವಹಿಸುವಿಕೆಯನ್ನು ಬೆಂಬಲಿಸಬೇಕು. ಮಕ್ಕಳಲ್ಲಿರುವ ಕ್ರೀಡಾ ಆಸಕ್ತಿಯನ್ನು ಗ್ರಹಿಸಿ, ಅಂತಹ ಪ್ರತಿಭೆಗಳನ್ನು ಗುರುತಿಸಿ, ಶಾಲಾ ಹಂತದಲ್ಲಿ ಕ್ರೀಡಾಕೂಟಗಳನ್ನು ನಡೆಸಿ, ಅವರನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಭದ್ರ ಬುನಾದಿಯನ್ನು ಹಾಕುವುದು ಶಿಕ್ಷಕರ ಪ್ರಮುಖ ಪಾತ್ರ. ಕ್ರೀಡಾ ಮೀಸಲಾತಿಯಿಂದಲೂ ಸಹ ಉತ್ತಮ ಹುದ್ದೆ ಪಡೆಯಲು ಬಹಳಷ್ಟು ಅವಕಾಶವಿದೆ ಎಂದು ತಿಳಿಸಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ದೊಡ್ಡಬಳ್ಳಾಪುರ ಶಾಖೆಯ ವ್ಯವಸ್ಥಾಪಕರಾದ ಸಂಜಯ ಕುಮಾರ್ ಸಿಂಗ್ ಮಾತನಾಡಿ, ಕ್ರೀಡೆಯಿಂದ ಶಿಸ್ತು ಬೆಳೆಯುತ್ತದೆ. ಕ್ರೀಡೆ ಮಕ್ಕಳಲ್ಲಿ ಸ್ನೇಹವನ್ನು ಗಟ್ಟಿಗೊಳಿಸಲು ಸಹಕಾರಿ ಹಾಗೂ ಪ್ರತಿ ಮಗುವೂ ಕೂಡಾ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಮಣ್ಯ ಮಾತನಾಡಿ, ಕ್ರೀಡೆಯು ಶಿಕ್ಷಣದ ಅವಿಭಾಜ್ಯ ಅಂಗ, ಪಠ್ಯಗಳ ಜೊತೆಗೆ ಕ್ರೀಡಾ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸುತ್ತವೆ ಎಂದರು.
ಒಲಂಪಿಕ್ ಮಾದರಿಯಲ್ಲಿ ನಡೆದ ಪಥ ಸಂಚಲನ, ಕ್ರೀಡಾ ಜ್ಯೋತಿ ಪ್ರಜ್ವಲನ, ಪುಟಾಣಿ ಮಕ್ಕಳ ಮ್ಯಾರಾಥಾನ್, ಯೋಗ,
ಡ್ರಿಲ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಾಲಾ ಕ್ರೀಡಾ ಮಹೋತ್ಸವ ವಿಜೃಂಭಣೆಯಿಂದ ಪ್ರಾರಂಭಗೊಂಡಿತು.
ವಿಜೇತರಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್, ನಿರ್ದೇಶಕರಾದ ನಯನಾ ಸ್ವರೂಪ್, ಪ್ರಾಂಶುಪಾಲರಾದ ರೆಮ್ಯ.ಬಿ.ವಿ., ಉಪಪ್ರಾಂಶುಪಾಲರಾದ ಪ್ರತಿಮಾ ಪೈ ಮತ್ತಿತರರಿದ್ದರು.