ಶಬರಿಮಲೆ: ವಿಶ್ವ ಪ್ರಸಿದ್ಧ shabarimale ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ವಾರ್ಷಿಕ ಮಂಡಲ ಪೂಜೆ ಶನಿವಾರ ಆರಂಭವಾಗಿದ್ದು, ಮೊದಲ ದಿನವೇ 70 ಸಾವಿರ ಭಕ್ತರು ದರ್ಶನ ಪಡೆದಿದ್ದಾರೆ.
ಶುಕ್ರವಾರದಿಂದಲೇ ಅಯ್ಯಪ್ಪ ಭಕ್ತರು ಸ್ವಾಮಿಯ ದರ್ಶನಕ್ಕಾಗಿ ದೇಗುಲದ ಆವರಣದಲ್ಲಿ ಸಾಲುಗಟ್ಟಿದ್ದರು.
ಮಂಡಲ ಪೂಜೆಯಲ್ಲಿ ಒಂದು ತಿಂಗಳು ಕಾಲ ದೇವಸ್ಥಾನ ತೆರೆಯಲಿದ್ದು ಬಳಿಕ ಪವಿತ್ರ ಮಾಸವಾದ ‘ವೃಶ್ಚಿಕಂ’ ಅವಧಿಯಲ್ಲಿ ಈ ಬಾರಿ ಮಕರವಿಳಕ್ಕು ಸಂಬಂಧ ದರ್ಶನ ಅವಕಾಶ ಸಿಗಲಿದೆ.
ಪ್ರತಿವರ್ಷದಂತೆ ಈ ಬಾರಿಯ ಮಕರವಿಳಕ್ಕು ಅವಧಿಯಲ್ಲಿ ಪ್ರತಿದಿನ ಸರತಿ ಸಾಲಿನಲ್ಲಿ ಬರುವ 70 ಸಾವಿರ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.
ಹೆಚ್ಚುವರಿಯಾಗಿ 10 ಸಾವಿರ ಭಕ್ತರು ಕೌಂಟರ್‌ಗಳಲ್ಲಿ ಮುಂಗಡ ಬುಕಿಂಗ್ ಮಾಡಿದವರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಕೇರಳ ಸರಕಾರ ತಿಳಿಸಿದೆ.
ಪೊಲೀಸ್ ಭದ್ರತೆ: ವಾರ್ಷಿಕ ವಿಶೇಷ ಪೂಜೆಗೆ ಪುಣ್ಯಕ್ಷೇತ್ರ ಶಬರಿಮಲೆ ಸಜ್ಜಾಗಿದ್ದು, ನಿತ್ಯವೂ 1 ಲಕ್ಷ ಭಕ್ತರನ್ನು ನಿರ್ವಹಿಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರ್ಶನಕ್ಕೆ ಬರುವ ಸಾಧ್ಯತೆಯಿದೆ. ಹಾಗಾಗಿ ಪ್ರತಿನಿತ್ಯವೂ ಒಂದು ಲಕ್ಷ ಭಕ್ತರಿಗೆ ದರ್ಶನಕ್ಕೆ ಅವಕಾಶ ಒದಗಿಸುವುದಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಎಡಿಜಿಪಿ ಎಸ್.ಶ್ರೀಜಿತ್ ತಿಳಿಸಿದ್ದಾರೆ.