ತುಮಕೂರು; ರಸ್ತೆ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ (Accident) ತಂದೆ ಹಾಗೂ ಮಗ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಶಿರಾ ತಾಲ್ಲೂಕಿನ ಕಡಬಗೆರೆ ಬ್ರಿಡ್ಜ್ ಬಳಿ ಇಂದು ಬೆಳಗ್ಗೆ ನಡೆದಿದೆ.
ಮೃತ ದುರ್ದೈವಿಗಳನ್ನು 35 ವರ್ಷದ ಗುರುರಾಜು, 2 ವರ್ಷದ ರಿಶಾಂಕ್ ಎಂದು ಗುರುತಿಸಲಾಗಿದೆ.
ಮುಂಡರಗಿಯಿಂದ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ಬರುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದರೆ, ಪತ್ನಿ ಹರ್ಷಿತಾ (28) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಶಿರಾ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ 6.30ರ ಸಮಯದಲ್ಲಿ ಘಟನೆ ನಡೆದಿದ್ದು, ಹೆಚ್ಚಾಗಿ ಮಂಜು ಆವರಿಸಿದ್ದರಿಂದ ರಸ್ತೆಯಲ್ಲಿನ ವಾಹನಗಳು ಸಪ್ತವಾಗಿ ಕಾಣದೆ ಈ ಅಪಘಾತ ನಡೆದಿದೆ ಎನ್ನಲಾಗಿದೆ.
ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಕಳ್ಳಂಬೆಳ್ಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.