ದೊಡ್ಡಬಳ್ಳಾಪುರ (Doddaballapura); ಜೀವನದಲ್ಲಿ ಕ್ರೀಡೆಯನ್ನು ರೂಡಿಸಿಕೊಂಡು ಪ್ರತಿ ದಿನ ಅಭ್ಯಾಸ ಮಾಡಿದರೆ ಜಯ ಎಂಬುದು ತಾನಾಗಿ ಲಭಿಸುತ್ತದೆ ಎಂದು ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಆರ್ಯ ಎಸ್ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇಲ್ಲಿನ ಶ್ರೀ ದೇವರಾಜ್ ಅರಸ್ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ಇಂದು ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಯಶಸ್ಸು ದೊರಕಲು ನಿರಂತರ ಅಭ್ಯಾಸ ಅಗತ್ಯ. ಸೋಲಿನಿಂದ ಹತಾಶರಾಗದೆ ಗೆಲುವಿನ ಗುರಿಯೆಡೆಗೆ ಪ್ರಯತ್ನ ನಿರಂತರವಾಗಿರಬೇಕು ಎಂದರು.
ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಇಂದಿನ ಯುವ ಪೀಳಿಗೆ ಮೊಬೈಲ್ ಫೋನ್ಗಳನ್ನು ಮಿತಿ ಮೀರಿ ಬಳಸುತ್ತಿದ್ದು, ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ತುಂಬಾ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸದೃಢವಾದ ದೇಹವುಳ್ಳವನಿಗೆ ಸದೃಢವಾದ ಮನಸ್ಸಿರುತ್ತದೆ. ಆದ್ದರಿಂದ ಯುವ ಜನತೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಗಮನ ನೀಡಬೇಕಿದೆ. ಶಾಲೆಯ ಮಕ್ಕಳು ಕೇವಲ ಪುಸ್ತಕಕ್ಕೆ ಸೀಮಿತವಾಗಿರದೆ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿರಬೇಕೆಂಬುದು ದಿ.ಆರ್.ಎಲ್.ಜಾಲಪ್ಪ ಅವರ ಕನಸಾಗಿದ್ದು, ಈ ಹಿನ್ನೆಲೆಯಲ್ಲಿ ಆಟದ ಮೈದಾನ ಮಾಡಿದರು ಎಂದು ಸ್ಮರಿಸಿದರು.
ಶ್ರೀ ದೇವರಾಜ್ ಅಂತರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಧನಂಜಯ್ ಜಿ.ಎನ್ ಮಾತನಾಡಿ, ಶೈಕ್ಷಣಿಕ ಚಟುವಟಿಕೆಯಂತೆಯೇ, ಕ್ರೀಡೆಗಳಿಗೂ ಕೂಡ ನಮ್ಮ ಶಾಲೆಯಲ್ಲಿ ಮುಕ್ತವಾದ ವಾತಾವರಣ, ಅಗತ್ಯ ಸೌಲಭ್ಯವಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿಹೆಚ್ ನಾಗರಾಜ್, ಆರ್‌ಎಲ್ ಜಾಲಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ರಾಕೇಶ್, ದೇವರಾಜ್ ಅರಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹಾಂತೇಶಪ್ಪ, ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿಯವುಲ್ಲಾ ಖಾನ್, ವ್ಯವಸ್ಥಾಪಕ ರವಿಕುಮಾರ್.
ಆರ್ ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ದಾದಾಪೀರ್, ದೇವರಾಜ್ ಅರಸ್ ಪ್ರಥಮ ದರ್ಜೆ ಕಾಲೇಜು ಹಾಗೂ ದೇವರಾಜ್ ಅರಸ್ ಅಂತರಾಷ್ಟ್ರೀಯ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮಧು, ಲಿಂಗರಾಜ್, ಶ್ರೀನಿವಾಸ್, ಆನಂದ್ ಸೇರಿದಂತೆ ಬೋಧಕ ಹಾಗೂ ಬೋಧಕ್ಕೆತರ ಸಿಬ್ಬಂದಿಗಳು ಹಾಜರಿದ್ದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನಿಸಲಾಯಿತು.