ವಿಜಯಪುರ: ಪ್ರತಿಯೊಬ್ಬ ವಿದ್ಯಾರ್ಥಿಗಳು ತಂದೆ-ತಾಯಿಯ ಕನಸನ್ನು ನನಸು ಮಾಡಬೇಕು. ಇದಕ್ಕೆ ಕಠಿಣ ಶ್ರಮದ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ (lakshmi hebbalkar) ಹೇಳಿದ್ದಾರೆ.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವತಿಯಿಂದ ನಡೆದ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವ ಜನೋತ್ಸವ ‘ಶಕ್ತಿ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಕನ್ನಡದ ಪ್ರಪ್ರಥಮ ಮಹಿಳಾ ಕವಿಯತ್ರಿಯಾದ ಅಕ್ಕಮಹಾದೇವಿ ಅವರು ನಮ್ಮೆಲ್ಲರ ಆದರ್ಶವಾಗಿದ್ದಾರೆ ಎಂದರು.
ನಾನೊಬ್ಬಳು ತಾಯಿಯಾಗಿ, ರೈತನ ಮಗಳಾಗಿ, ಹಲವು ಏಳು ಬೀಳುಗಳ ನಡುವೆ ಇಂದು ಕರ್ನಾಟಕದ ಮಂತ್ರಿಯಾಗಿರುವೆ. ಪುರುಷರಿಗೆ 100 ಮೀಟರ್ ಓಡಿದರೂ ಗೋಲ್ಡ್ ಮೆಡಲ್ ಸಿಗುತ್ತದೆ. ಆದರೆ, ಸಾವಿರ ಮೀಟರ್ ಓಡಿದರೂ ಮಹಿಳೆಯರಿಗೆ ಮೆಡಲ್ ಕೊಡಲು ಹಿಂದೆ ಮುಂದೆ ನೋಡಲಾಗುತ್ತದೆ ಎಂದು ಸಚಿವರು ಹೇಳಿದರು.
ಹೆಣ್ಣು ಮಕ್ಕಳಲ್ಲಿ ಪರಸ್ಪರ ಸಹಕಾರ ಇರಬೇಕು. ಇಂದು ಹೆಣ್ಣು ಮಕ್ಕಳು ತೊಟ್ಟಿಲಿಗೆ ಸೀಮಿತವಿಲ್ಲ. ಇಂದು ಹೆಣ್ಣು ಹುಟ್ಟಿದರೂ ಸಂಭ್ರಮ ಪಡುವ ಸಂದರ್ಭದಲ್ಲಿ ನಾವಿದ್ದೇವೆ. ಸುಂದರ ಸಮಾಜ, ಸಂಸ್ಕೃತಿ ದೇಶದಲ್ಲಿ ನಾವಿದ್ದೇವೆ ಎಂದು ಸಚಿವರು ಹೇಳಿದರು.
ಕಷ್ಟ ಎಲ್ಲರಿಗೂ ಇರುತ್ತದೆ. ಆದರೆ ಗುರಿ ತಲುಪುವುದು ಮುಖ್ಯ, ಗುರಿ ಇಲ್ಲದ ಜೀವನ ಬೋರಗಲ್ಲ ಮೇಲೆ ಮಳೆ ಸುರಿದಂತೆ. ಪ್ರಾಮಾಣಿಕವಾದ ಗುರಿ ಇರಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಪ್ರತಿಯೊಬ್ಬರು ತಂದೆ ತಾಯಿ ಕನಸುಗಳನ್ನು ಈಡೇರಿಸಬೇಕು. ನಾನೂ ಕೂಡ ಹಿಂದುಳಿದ ಪ್ರದೇಶದಿಂದ ಬಂದಿದ್ದೇನೆ. ಕೆಂಪು ಬಸ್ಸಿನಲ್ಲಿ ಓಡಾಡಿದ್ದೇನೆ. ಇಂದಿಗೂ ಅದೇ ಛಲ ನನ್ನಲ್ಲಿದೆ ಎಂದರು.
ಇರುವೆಗಳಿಗೂ ಸ್ವಾಭಿಮಾನ ಇರುತ್ತದೆ. ಮುಂದಾಲೋಚನೆ ಇರುತ್ತದೆ. ಮನುಷ್ಯರಾದ ನಮಗೆ ಮುಂದಿನ 80 ವರ್ಷಕ್ಕೆ ಜೀವನ ರೂಪಿಸುವ ಪರಿಕಲ್ಪನೆ ಬೇಕಲ್ಲವೇ. ವಿದ್ಯಾರ್ಥಿ ಜೀವನ ಗೋಲ್ಡನ್ ಟೈಮ್ ಇದ್ದಂತೆ. ಜೀವನ ವಿಕಸನ ಮಾಡಿಕೊಳ್ಳಲು ಇದು ಪ್ರಮುಖ ಘಟ್ಟ. ದೇಶ ಎತ್ತರಕ್ಕೆ ಬೆಳೆಯುತ್ತಿದೆ, ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಎಲ್ಲರೂ ಸಜ್ಜಾಗಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಸಚಿವೆ ಕಣ್ಣಿಗೆ ಬಿದ್ದ ನಿರ್ಗತಿಕ ಕುಟುಂಬ: ನೆರವು ನೀಡಿ ಮಾನವೀಯತೆ ತೋರಿದ ಲಕ್ಷ್ಮೀ ಹೆಬ್ಬಾಳಕರ್| lakshmi hebbalkar
ಮುಂದೆ ಹುಟ್ಟುವ ನಿಮ್ಮ ಮಕ್ಕಳಿಗೆ ನೀವೇ ಆದರ್ಶವಾಗಿರಿ, ಅರುಣಿಮಾ ಸಿನ್ಹಾ, ಸುಪ್ರಿಯಾ ರಾಯ್ ಅವರಂಥ ಮಹಿಳೆಯರು ಜೀವನದ ಪ್ರತಿಯೊಂದು ಹಂತದಲ್ಲೂ ಸ್ಫೂರ್ತಿಯಾಗಲಿ ಎಂದರು.
ಮಹಿಳೆ ಎಂದರೆ ಸಾಧನೆ, ಜೀವನದಲ್ಲಿ ಸಾಧನೆ ಬಹಳ ಮುಖ್ಯ. ಮಹಿಳೆ ಇಲ್ಲದೆ ಮನೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ರಾಜಕೀಯದ ಕೂಡ. ಮಹಿಳಾ ಮೀಸಲಾತಿಯನ್ನು ನಾವೇ ಮಾಡಿದ್ದು, ಆಗ ಬಹುಮತ ಕೊರತೆಯಿಂದ ಲೋಕಸಭೆಯಲ್ಲಿ ಪಾಸ್ ಆಗಲಿಲ್ಲ. ಈಗ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಬಿ.ಕೆ.ತುಳಸಿಮಾಲ,
ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ತೊರವಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮಾಬಾಯಿ ನಡಗಡ್ಡಿ, ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ, ಪ್ರೊ.ಶಾಂತಾದೇವಿ, ಸಿಂಡಿಕೇಟ್ ಮತ್ತು ಅಕಾಡೆಮಿ ಕೌನ್ಸಿಲ್ ಸದಸ್ಯರು, ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.