ತಿ.ನರಸೀಪುರ: ಸಾಕಿದ್ದ ಕೋಳಿಗಳು ಮನೆಗೆ ನುಗ್ಗಿ ಗಲೀಜು ಮಾಡುವ ವಿಚಾರಕ್ಕೆ ಆರಂಭವಾದ ಜಗಳ ಒಬ್ಬನ ಕೊಲೆಯಲ್ಲಿ (Murder) ಅಂತ್ಯಗೊಂಡಿರುವ ಘಟನೆ ತಾಲೂಕಿನ ದೊಡ್ಡಬಾಗಿಲು ಗ್ರಾಮದಲ್ಲಿ ಸಂಭವಿಸಿದೆ.
ದೊಡ್ಡಬಾಗಿಲು ಗ್ರಾಮದ ವಾಸಿ ಮಹದೇವಸ್ವಾಮಿ ಕೊಲೆಯಾದ ದುರ್ದೈವಿ.
ನಿನ್ನೆ ಬೆಳಗ್ಗೆ ಮನೆಯ ಮುಂದೆ ಮಹದೇವಸ್ವಾಮಿ ಅವರ ಪತ್ನಿ ಪಾತ್ರೆ ತೊಳೆಯುತ್ತಿದ್ದಾಗ, ಇವರ ದಾಯಾದಿ ನಂಜಮ್ಮನವರು ಮಾತನಾಡುತ್ತ ಮನೆಯ ಮುಂದೆ ನಿಂತಿದ್ದರು.
ಈ ವೇಳೆ ಎದುರು ಮನೆಯ ರಾಜಮ್ಮ ಮತ್ತು ಇವರ ತಾಯಿ ಸಿದ್ದಮ್ಮನವರು ನಿಮ್ಮ ಮನೆಯ ಕೋಳಿಗಳು ನಮ್ಮ ಮನೆಗೆ ಬಂದು ಗಲೀಜು ಮಾಡುತ್ತಿವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ನಂಜಮ್ಮನವರ ತಲೆ ಜುಟ್ಟು ಹಿಡಿದು ಎಳೆದಾಡ ತೊಡಗಿದ್ದಾರೆ.
ಇದನ್ನು ಕಂಡ ಮಹದೇವಸ್ವಾಮಿಯವರ ಪತ್ನಿ ಪಾತ್ರೆ ತೊಳೆಯುವುದನ್ನು ಬಿಟ್ಟು ಜಗಳ ಬಿಡಿಸಲು ಮುಂದಾಗಿದ್ದಾರೆ. ಆಗ ಸಿದ್ದಮ್ಮ ಜಗಳ ಬಿಡಿಸಲು ಬಂದವರ ತಲೆಗೂದಲನ್ನು ಹಿಡಿದು ಎಳೆದಾಡಿದ್ದಾರೆ.
ಇದೇ ವೇಳೆ ರಾಜಮ್ಮ ಅಲ್ಲೆ ಬಿದ್ದಿದ್ದ ಕಲ್ಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದಾಗ ಎಡಗಣ್ಣಿಗೆ ಪೆಟ್ಟು ಬಿದ್ದಿದೆ. 00
ಇದೇ ಸಂದರ್ಭದಲ್ಲಿ ತನ್ನ ಪತ್ನಿ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಮಹದೇವಸ್ವಾಮಿ ಜಗಳ ಬಿಡಿಸಲು ಬಂದಾಗ ರಾಜಮ್ಮ ಮತ್ತು ಸಿದ್ದಮ್ಮ ಇಬ್ಬರೂ ಮಹದೇವಸ್ವಾಮಿಯನ್ನು ಎಳೆದಾಡಿ ಮರ್ಮಾಂಗಕ್ಕೆ ಒದ್ದು ಕೆಳಗೆ ಬೀಳಿಸಿದ್ದಾರೆ ಎನ್ನಲಾಗಿದೆ.
ನಂತರ ಜಗಳ ಬಿಟ್ಟು ಮನೆಯವರೆಲ್ಲ ಮಹದೇವಸ್ವಾಮಿಯನ್ನು ಎಬ್ಬಿಸಲು ಯತ್ನಿಸಿದಾಗ ಇಡೀ ದೇಹ ತಣ್ಣಗಾಗಿ ಸಾವನ್ನಪ್ಪಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನನ್ನ ಗಂಡನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ರಾಜಮ್ಮ ಮತ್ತು ಸಿದ್ದಮ್ಮ ಅವರ ಮೇಲೆ ಕ್ರಮ ಜರುಗಿಸಬೇಕು. ತಮಗೆ ನ್ಯಾಯ ಒದಗಿಸುವಂತೆ ಪತ್ನಿ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ನಾಗೇಶ್, ಡಿವೈಎಸ್ಪಿ ರಘು ಹಾಗೂ ಸರ್ಕಲ್ ಇನ್‌ಸೆಕ್ಟರ್ ಧನಂಜಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.