ನವೆಂಬರ್: ಮುಡಾ ಹಗರಣ ಬೆಳಕಿಗೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರ ಬಿಜೆಪಿ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ಆದರೆ ಬಿಜೆಪಿ ಇದಕ್ಕೆ ಹೆದರದೆ ಹೋರಾಟ ಮುಂದುವರಿಸಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (RAshoka) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧದ ಪ್ರಕರಣವನ್ನು 2021 ರಲ್ಲೇ ರಾಜ್ಯಪಾಲರು ತಿರಸ್ಕರಿಸಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದ ಬಳಿಕ ಹಾಗೂ ಮುಡಾ ಹಗರಣ ಬೆಳಕಿಗೆ ಬಂದ ನಂತರ ಜ್ಞಾನೋದಯವಾಗಿದೆ. ಇದು ದ್ವೇಷದ ರಾಜಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ. ರಾಜ್ಯಪಾಲರು ಈ ಪ್ರಕರಣ ತಿರಸ್ಕರಿಸಿದಾಗ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದರು. ಆಗಲೇ ಅವರು ಅದನ್ನು ಪ್ರಶ್ನೆ ಮಾಡಿ ಕೋರ್ಟ್‌ಗೆ ಹೋಗಬಹುದಿತ್ತು ಎಂದರು.
ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಕಾಂಗ್ರೆಸ್‌ಗೆ ಸ್ವಾರ್ಥದ ಕೆಲಸ ಮಾಡಿಸಿಕೊಳ್ಳಬೇಕಿತ್ತು. ಈಗ ಅದನ್ನು ಮತ್ತೆ ವಿವಾದ ಮಾಡುತ್ತಿದ್ದಾರೆ ಎಂದರೆ ಅದು ದ್ವೇಷದ ರಾಜಕಾರಣ. ನನ್ನ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ವಿರೋಧ ಪಕ್ಷದವರನ್ನು ದ್ವೇಷಿಸುವ ರಾಜಕಾರಣವನ್ನು ಬಿಜೆಪಿ ಎಂದಿಗೂ ಮಾಡಿಲ್ಲ. ಆದರೆ ಇದು ಕಾಂಗ್ರೆಸ್‌ನ ಚಾಳಿ. ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗಲೂ ಬಿಜೆಪಿ ನಾಯಕರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ವಿರೋಧ ಪಕ್ಷವನ್ನು ದಮನ ಮಾಡುವುದು ಇವರ ಚಾಳಿ. ಇದಕ್ಕೆ ಬಿಜೆಪಿ ಹೆದರದೆ ಹೋರಾಟ ಮಾಡಲಿದೆ. ಎಷ್ಟೇ ಪ್ರಕರಣ ದಾಖಲಿಸಿದರೂ ಅದನ್ನು ಎದುರಿಸುತ್ತೇವೆ ಎಂದರು.
14 ನಿವೇಶನ ಲೂಟಿ ಮಾಡಿದ ಪ್ರಕರಣ ಬಯಲಿಗೆ ಬಂದಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮಾಡಿದ್ದಾರೆ. ಈ ಹಿಂದೆಯೂ ಕಾಂಗ್ರೆಸ್ ಆಡಳಿತವಿತ್ತು. ಆಗೆಲ್ಲ ರಾಜ್ಯಪಾಲರ ಅಧಿಕಾರ ತೆಗೆದುಹಾಕುವ ಕೆಲಸ ಮಾಡಲಿಲ್ಲ. ಈಗ ಮಾತ್ರ ಅಧಿಕಾರ ಕಿತ್ತುಕೊಳ್ಳುವ ನಿರ್ಣಯಗಳನ್ನು ಮಾಡಲಾಗಿದೆ. ಇದನ್ನು ಜನರು ಗಮನಿಸುತ್ತಿದ್ದು, ಮುಂದೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ಒಕ್ಕಲಿಗ ಸ್ವಾಮೀಜಿಗೆ ಕಿರುಕುಳ
ವಿಶ್ವ ಒಕ್ಕಲಿಗರ ಮಠದ ಸ್ವಾಮೀಜಿಯವರ ವಿರುದ್ಧ ಪ್ರಕರಣ ದಾಖಲಿಸಿ ಕಿರುಕುಳ ನೀಡಲು ಸರ್ಕಾರ ಮುಂದಾಗಿದೆ. ಒಕ್ಕಲಿಗ ಸ್ವಾಮೀಜಿ ಮೇಲೆಯೂ ದಬ್ಬಾಳಿಕೆ ಮಾಡುವ ವ್ಯವಸ್ಥಿತ ಸಂಚು ಮಾಡಲಾಗಿದೆ. ಕೋರ್ಟ್ ಆದೇಶ ಪಾಲನೆ ಮಾಡಲ್ಲ, ರಸ್ತೆ ಎಲ್ಲವೂ ನಮ್ಮದೇ ಎಂದವರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಸಿಎಂ ಸಿದ್ದರಾಮಯ್ಯನವರಿಗೆ ಹಿಂದೂಗಳನ್ನು ಕಂಡರೆ ಅಲರ್ಜಿ. ಆದ್ದರಿಂದಲೇ ಒಕ್ಕಲಿಗ ಸ್ವಾಮೀಜಿ ವಿರುದ್ಧ ದ್ವೇಷ ಕಾರಲಾಗುತ್ತಿದೆ. ಇದು ಒಕ್ಕಲಿಗ ಸಮುದಾಯಕ್ಕೆ ಮಾಡುತ್ತಿರುವ ಅಪಮಾನ ಎಂದರು.
ಸಿಎಂ ಸಿದ್ದರಾಮಯ್ಯ ಹೆಸರಿಗಷ್ಟೇ ಅಹಿಂದ. ಈಗ ಕೇವಲ ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದಾರೆ. ಸರ್ಕಾರ ಸಂಪೂರ್ಣ ಪಾಪರ್ ಆಗಿದೆ. ನೌಕರರಿಗೆ ವೇತನ ಕೊಡಲು ಕೂಡ ಹಣವಿಲ್ಲ. ಬಳ್ಳಾರಿ ಆಸ್ಪತ್ರೆಯಲ್ಲಿ ಕಳಪೆ ಔಷಧಿ ನೀಡಿರುವುದರಿಂದ ತಾಯಂದಿರು ಸತ್ತಿದ್ದಾರೆ. ಕೋವಿಡ್‌ನಲ್ಲಿ ಹಗರಣ ನಡೆದಿದೆ ಎಂದು ಹೇಳುವ ಕಾಂಗ್ರೆಸ್ ನಾಯಕರು, ಭ್ರಷ್ಟಾಚಾರಕ್ಕಾಗಿ ಕಳಪೆ ಔಷಧಿ ಪೂರೈಸಿದ್ದಾರೆ. ಈ ಸಾವಿಗೆ ಯಾರು ಕಾರಣ ಎಂದು ಜವಾಬ್ದಾರಿ ನಿಗದಿ ಮಾಡಿ. ಈ ಸಾವುಗಳಿಗೆ ನ್ಯಾಯ ನೀಡಿ ಎಂದು ಆಗ್ರಹಿಸಿದರು.
ಬಳ್ಳಾರಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ಮುಖ್ಯಮಂತ್ರಿ ಭೇಟಿ ನೀಡಿಲ್ಲ. ಮೋಜು, ಮಸ್ತಿ ಮಾಡಿಕೊಂಡು ಸಮಾವೇಶ ಮಾಡುತ್ತಿದ್ದಾರೆಯೇ ಹೊರತು ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ. ನಾನು ಕೂಡ ಈ ಬಗ್ಗೆ ವರದಿ ತರಿಸಿಕೊಳ್ಳುತ್ತಿದ್ದೇನೆ ಎಂದರು.