ತಮಿಳುನಾಡು: ಫೆಂಗಲ್ ಚಂಡಮಾರುತದ (Cyclonefengal) ಹೊಡೆತಕ್ಕೆ ತಮಿಳುನಾಡು ರಾಜ್ಯ ತತ್ತರಿಸಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಚೆನ್ನೈ ಭಾಗದಲ್ಲಿ ಹಲವಾರು ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಮನೆಗಳೆಲ್ಲ ಮಳೆ ನೀರಿನಿಂದ ಆವೃತ್ತವಾಗಿದ್ದು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇತ್ತ ಪುದುಚೇರಿಯಲ್ಲಿ ಕೂಡ ಕಳೆದ ಎರಡು ದಿನಗಳಿಂದ ವ್ಯಾಪಕವಾಗಿ ಮಳೆಯಾಗಿದ್ದು, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಯಾಗಿದೆ.
ತೀವ್ರ ಮಳೆಯಿಂದಾಗಿ ಉಂಟಾದ ಪ್ರವಾಹದ ರಭಸಕ್ಕೆ ಬಸ್ಸು ಕಾರು ಸೇರಿದಂತೆ ಹಲವಾರು ವಾಹನಗಳು ರಸ್ತೆಯಿಂದ ತಗ್ಗು ಪ್ರದೇಶಗಳಿಗೆ ಕೊಚ್ಚಿಕೊಂಡು ಹೋಗಿದೆ. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು ಎದೆ ಝಲ್ ಎನ್ನುವಂತಿದೆ.
ಈ ಸಂಕಷ್ಟದ ಪರಿಸ್ಥಿತಿಯ ನಡುವೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಪ್ರವಾಹದಲ್ಲಿ ಸಿಲುಕಿರುವ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಎನ್.ಡಿ.ಆರ್.ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರೆಸಿದ್ದಾರೆ.
ಇನ್ನೂ 48 ಗಂಟೆಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದ್ದು ಇನ್ನಷ್ಟು ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿದೆ.