ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (SM Krishna), ಕರ್ನಾಟಕ ರಾಜ್ಯ ಕಂಡ ಸಜ್ಜನ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂಥ ಮಾತು ಎಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಹೇಳಿದರು.
ಎಸ್ಎಂ ಕೃಷ್ಣ ಅವರ ಅಗಲಿಕೆ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಗಾದಿಯಿಂದ ಹಿಡಿದು, ಸಚಿವ, ಸ್ಪೀಕರ್, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವ… ಹೀಗೆ ಅನೇಕ ಉನ್ನತ ಹುದ್ದೆಗಳನ್ನು ಅವರು ಹೊಂದಿದ್ದರೂ.. ರಾಜಕಾರಣದ ಒಳಗಾಗಲೀ, ಹೊರಗಾಗಲಿ ಅವರೆಂದೂ ಸಮತೋಲನ ತಪ್ಪಿದವರಲ್ಲ.
ಎಸ್‌ಎಂ ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯಾದ್ಯಂತ ತೀವ್ರ ಬರಗಾಲ, ಕಾವೇರಿ ನೀರು ಬಿಡುವಂತೆ ಮಂಡಳಿಯ ಆದೇಶ, ದಂತ ಚೋರ ವೀರಪ್ಪನ್ ನಿಂದ ಮೇರುನಟ ಡಾ.ರಾಜ್ ಕುಮಾರ್ ಅವರ ಅಪಹರಣ ಮಂತಾದ ತೀವ್ರತರವಾದ ಸಂಕಷ್ಟ ಎದುರಿಸಿದರು ಕೂಡ ರಾಜ್ಯದ ಅಭಿವೃದ್ಧಿಗೆ ಅವರ ದೃಷ್ಟಿ ಎಂದಿಗೂ ಕೈಬಿಡಲಿಲ್ಲ.
ಆಗೆಲ್ಲ ನಾವು ಬೆಂಗಳೂರನ್ನು ಸಿಂಗಾಪುರ ಮಾಡೋ ಮುಖ್ಯಮಂತ್ರಿ ಎಂದು ಲೇವಡಿ ಮಾಡಿದ್ದೇವು ಆದರೆ ಅದರ ಪರಿಣಾಮ ಅಂದು ಅರಿವಾಗದಿದ್ದರು, ಇಂದು ಬೆಂಗಳೂರು ಭಾರತದ ಸಿಲಿಕಾನ್ ಸಿಟಿಯನ್ನಾಗಿದೆ. ಬೆಂಗಳೂರಿನಲ್ಲಿ ತಲೆ ಎತ್ತಿರುವ ಫ್ಲೈ ಓವರ್ ಗಳು, ವಿಶ್ವದ ಟೆಕ್ಕಿಗಳನ್ನು ಅಯಸ್ಕಾಂತದಂತೆ ಸೆಳೆಯುತ್ತಿರುವ ಐಟಿ ಪಾರ್ಕ್ ಇವೆಲ್ಲವೂ ಕೃಷ್ಣ ಅವರ ದೂರದೃಷ್ಟಿಯ ಫಲ.
ಈ ಎಲ್ಲಾ ಕಾರಣಗಳಿಂದ ಸಮಸ್ಯೆಗಳ ನಡುವೆ ಮಿನುಗಿದ ದೃವತಾರೆ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಎನ್ನಬಹುದಾಗಿದ್ದು, ಅವರ ಅಗಲಿಕೆ ರಾಜ್ಯ ಮತ್ತು ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಜಘಟ್ಟರವಿ ತಿಳಿಸಿದರು.