ಹೈದರಾಬಾದ್: ವಿವಾದಗಳಿಂದ ಸದಾ ದೂರ ಉಳಿಯುವ, ಸಾರ್ವಜನಿಕವಾಗಿ ಹೆಚ್ಚಾಗಿ ಕಾಣದೆ ತಾನಾಯಿತು, ತನ್ನ ಸಿನಿಮಾ ಪ್ರಪಂಚ, ಕುಟುಂಬಕ್ಕೆ ಸೀಮಿತವಾಗಿರುವ ತೆಲುಗು ಚಿತ್ರರಂಗದ ಖ್ಯಾತ ನಟ ವಿಕ್ಟರಿ ವೆಂಕಟೇಶ್ (Victory venkatesh). ಆದರೆ ಅಚ್ಚರಿ ಬೆಳವಣಿಗೆಯಲ್ಲಿ ಅವರ ‘ಸಂಕ್ರಾಂತಿಕಿ ವಸ್ತುನ್ನಂ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಿರುವಾಗಲೇ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಹೈದರಾಬಾದ್‌ನ ಫಿಲ್ಡ್‌ಸಿಟಿಯಲ್ಲಿದ್ದ ಡೆಕ್ಕನ್ ಕಿಚನ್ ಎಂಬ ಹೋಟೆಲ್ ನೆಲಸಮ ಮಾಡಿರುವ ಆರೋಪದಡಿ ಕೋರ್ಟ್ ಆದೇಶದಂತೆ ನಿರ್ಮಾಪಕ ಸುರೇಶ್ ಬಾಬು, ವೆಂಕಟೇಶ್, ರಾಣಾ ದಗ್ಗುಬಾಟಿ ಮತ್ತು ಅಭಿರಾಮ್ ವಿರುದ್ಧ ಫಿಲ್ಡ್ ಸಿಟಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಡೆಕ್ಕನ್ ಕಿಚನ್ ವಿವಾದ ಸಂಬಂಧ ನಂದಕುಮಾರ್ ಎನ್ನುವವರು ನಾಂಪಲ್ಲಿಯ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದ್ದು, ತಡೆಯಾಜ್ಞೆ ನೀಡಿದೆ.
ಕೋರ್ಟ್ ತಡೆ ನೀಡಿ ನಂತರವೂ ಹೋಟೆಲ್ ಧ್ವಂಸ ಮಾಡಿರುವ ಆರೋಪ ವೆಂಕಟೇಶ್ ಕುಟುಂಬದ ಮೇಲಿದ್ದು, ಈ ಕುರಿತು ನಾಂಪಲ್ಲಿ ಕೋರ್ಟ್ ತೀವ್ರವಾಗಿ ಪ್ರತಿಕ್ರಿಯಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಡೆಕ್ಕನ್ ಕಿಚನ್ ಹೋಟೆಲ್ ಅನ್ನು ಅಕ್ರಮವಾಗಿ ಕೆಡವಿದ್ದಕ್ಕಾಗಿ ವೆಂಕಟೇಶ್, ಸುರೇಶ್ ಬಾಬು, ರಾಣಾ ಮತ್ತು ಅಭಿರಾಮ್ ವಿರುದ್ಧ ಸೆಕ್ಷನ್ 448, 452, 458 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅದರಲ್ಲೂ ವೆಂಕಟೇಶ್ ಅಭಿನಯದ ‘ಸಂಕ್ರಾಂತಿಕಿ ವಸ್ತುನ್ನಂ’ ಶೀಘ್ರದಲ್ಲೇ ಬಿಡುಗಡೆಯಾಗುತ್ತಿರುವ ಈ ಬೆಳವಣಿಗೆಗಳು ಅಚ್ಚರಿ ಮೂಡಿಸಿವೆ.
ಅನಿಲ್ ರವಿಪುಡಿ ನಿರ್ದೇಶನದ ಮತ್ತು ದಿಲ್ ರಾಜು ನಿರ್ಮಾಣದ ಈ ಚಿತ್ರದಲ್ಲಿ ಮೀನಾಕ್ಷಿ ಚೌಧರಿ ಮತ್ತು ಐಶ್ವರ್ಯಾ ರಾಜೇಶ್ ನಟಿಸಿದ್ದಾರೆ.