ಮುಂಬೈ: ಗುರುವಾರ ಬೆಳಗ್ಗಿನ ಜಾವ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ (Saif Ali Khan) ಅವರ ನಿವಾಸಕ್ಕೆ ನುಗ್ಗಿ ಚಾಕು ಇರಿದು ಪರಾರಿಯಾಗಿದ್ದ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಬೈನ ಬಾಂದ್ರಾ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಪತ್ತೆಯಾದ ಚಲನವಲನಗಳು ಆದರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಬಳಿಕ ಮತ್ತಷ್ಟು ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
ಗುರುವಾರ ಸೈಫ್ ಅಲಿ ಖಾನ್ ನಿವಾಸದಲ್ಲಿ ಹಲ್ಲೆ ನಡೆಸಿದ್ದ ಆರೋಪಿ, ಆರು ಬಾರಿ ಸೈಫ್ ಗೆ ಚಾಕುವಿನಿಂದ ಇರಿದಿದ್ದ ಬಳಿಕ ಒಂದು ಕೋಟಿ ರೂ. ಹಣಕ್ಕೂ ಸಹ ಬೇಡಿಕೆಯಿಟ್ಟಿದ್ದ ಎಂದು ಆರೋಪಿಸಲಾಗಿದೆ.
ದೇಹದಲ್ಲಿದ್ದ ಚಾಕು
ಇರಿತಕ್ಕೊಳಗಾದ ಸೈಫ್ ಅಲಿ ಖಾನ್ ದೇಹದಿಂದ ವೈದ್ಯರು ಎರಡೂವರೆ ಇಂಚಿನ ಚಾಕುವನ್ನು ಹೊರತೆಗೆದಿದ್ದಾರೆ. ಈ ಚಾಕುವಿನ ಫೋಟೋ ಹೊರಬಿದ್ದಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಫೋಟೊದಲ್ಲಿ ಕಂಡುಬರುವ ತುಂಡಾದ ಚಾಕುವಿನಲ್ಲಿ ರಕ್ತವಿದೆ ಮತ್ತು ಅದು ತುಂಬಾ ಅಪಾಯಕಾರಿಯಾಗಿದೆ. ಒಂದು ವೇಳೆ ಚಾಕು ಆಳಕ್ಕೆ ತೂರಿಕೊಂಡಿದ್ದರೆ ನಟನ ಸ್ಥಿತಿ ಗಂಭೀರವಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.
ಸೈಫ್ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಅವರನ್ನು ಐಸಿಯುನಿಂದ ವಿಶೇಷ ವಾರ್ಡ್ ಕಳುಹಿಸಲಾಗುತ್ತಿದೆ. ಸೈಫ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಅವರಿಗೆ ನಡೆಯಲು ಯಾವುದೇ ತೊಂದರೆ ಇಲ್ಲ ಮತ್ತು ಅವರು ಅದೃಷ್ಟವಂತರು. ನಟನಿಗೆ ಬೆನ್ನುಮೂಳೆಯಲ್ಲಿ ಗಾಯವಾಗಿದೆ. ಹೀಗಾಗಿ ನಟನಿಗೆ ಒಂದು ವಾರ ಬೆಡ್ ರೆಸ್ಟ್ ಅಗತ್ಯವಾಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.
ಇನ್ನು 2ರಿಂದ 3 ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಪೊಲೀಸರು ಸೈಫ್ ಅಲಿ ಖಾನ್ ಅವರ ದೇಹದಿಂದ ಹೊರತೆಗೆದ ಚಾಕುವನ್ನು ಸಾಕ್ಷ್ಯವಾಗಿ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.