ತಿರುವನಂತಪುರಂ: ಕನ್ನಡದಲ್ಲಿ ಖ್ಯಾತ ನಟ ರವಿಚಂದ್ರನ್ ಮತ್ತು ಕಾಮಿನಿ ನಟನೆಯ ಯುಗಪುರುಷ ಸಿನಿಮಾ ಬಹುತೇಕರಿಗೆ ನೆನಪಿದೆ.
ಆ ಚಿತ್ರದಲ್ಲಿ ನಟಿ ಕಾಮಿನಿ ಆಕೆಯ ಪ್ರೀತಿಸಿ ಮದುವೆಯಾದ ರಾಮಕೃಷ್ಣ ಅವರನ್ನು ಆಸ್ತಿಯ ಆಸೆಗೆ ಹತ್ಯೆ ಮಾಡಿದಂತೆ, ಸೇನಾಧಿಕಾರಿಯೊಂದಿಗೆ ಮದುವೆಯಾಗಲು ಮನಸಾರೆ ಪ್ರೀತಿಸಿದ ಯುವಕನ ವಿಷ ಉಣಿಸಿ ಕೊಂದ ಪ್ರೇಯಸಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆ ರಾಮವರ್ಮಂಚಿರದ ಗ್ರೀಷ್ಮಾಗೆ (24 ವರ್ಷ) ಪ್ರೇಮಿ ಶರೋನ್ ರಾಜ್ ಗೆ ವಿಷ ಕುಡಿಸಿ ಹತ್ಯೆ ಮಾಡಿದ ಆರೋಪದಡಿ ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
ನ್ಯಾಯಾಧೀಶರಾದ ಎ.ಎಂ. ಬಶೀರ್ ಅವರು, ಇದು ಅಪರೂಪದ ಪ್ರಕರಣವಾಗಿದೆ. ಪೂರ್ವನಿಯೋಜಿತ ಸಂಚು ನಡೆಸಿ ಕೊಲೆ ಮಾಡಲಾಗಿದೆ. ಅಪರಾಧಿ ಯಾವುದೇ ವಿನಾಯಿತಿಗೆ ಅರ್ಹಳಲ್ಲ. ಅಪರಾಧಿಯ ವಯಸ್ಸು-ಶೈಕ್ಷಣಿಕ ಅರ್ಹತೆ ಯಾವುದನ್ನೂ ಶಿಕ್ಷೆ ವಿಧಿಸುವ ವಿಚಾರದಲ್ಲಿ ಪರಿಗಣಿಸಲಾಗದು.
ಯುವತಿ ಪ್ರೀತಿಯ ಪಾವಿತ್ರ್ಯವನ್ನು ಹಾಳುಗೆಡವಿದ್ದಾಳೆ. ಆಕೆ ನಡೆಸಿದ ಅಪರಾಧ ಕೃತ್ಯ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವಂತದ್ದಾಗಿದೆ. ಹಾಗಾಗಿ ಅಪರಾಧಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆಯಾಗಿದೆ ಎಂದು ತೀರ್ಪು ಪ್ರಕಟಿಸಿದರು.
ತೀರ್ಪು ಆಲಿಸಲು ಶರೋನ್ ಪೋಷಕರನ್ನೂ ನ್ಯಾಯಾಲಯ ಕರೆಸಿತ್ತು. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಪೋಷಕರು ಕಣ್ಣೀರಾದರು.
ವಿಷವುಣಿಸಿ ಹತ್ಯೆ, ಬಳಿಕ ಸಾಕ್ಷ್ಯ ನಾಶ ಸೇರಿ ಎಲ್ಲಾ ಆರೋಪಗಳಲ್ಲಿಯೂ ಗ್ರೀಷ್ಮಾ ತಪ್ಪಿತಸ್ಥಳು ಎಂದು ನ್ಯಾಯಾಲಯ ಈ ಮೊದಲೇ ಘೋಷಿಸಿತ್ತು. ಸಾಕ್ಷ್ಯ ನಾಶ ಮಾಡಿದ್ದಕ್ಕಾಗಿ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್‌ಗೂ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಾಕ್ಷ್ಯಾಧಾರ ಕೊರತೆ ಕಾರಣ ಗ್ರೀಷ್ಮಾ ತಾಯಿ ಸಿಂಧುವನ್ನು ಈ ಹಿಂದೆಯೇ ಆರೋಪ ಮುಕ್ತಗೊಳಿಸಲಾಗಿದೆ.
ಸಿಂಧು ಖುಲಾಸೆಗೊಂಡಿರುವುದಕ್ಕೆ ಅಸಮಾಧಾನಗೊಂಡಿರುವ ಶರೋನ್ ಪೋಷಕರು, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
2022ರ ಶರೋನ್ ರಾಜ್ ಹತ್ಯೆ ಪ್ರಕರಣ
ಬಿಎಸ್‌ಸಿ ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ (23) ಮತ್ತು ಗ್ರೀಷ್ಮಾ ಮಧ್ಯೆ 2021ರಲ್ಲಿ ಪ್ರೀತಿಯಾಗಿತ್ತು.
ಬಳಿಕ ನಾಗರಕೋಯಿಲ್ ಸೇನಾಧಿಕಾರಿ ಜತೆ ಮದುವೆ ಪ್ರಸ್ತಾಪ ಬಂದಾಗ ಗ್ರೀಷ್ಮಾ, ಆವರೆಗೂ ಪ್ರೀತಿಸಿದ್ದ ಶರೋನನ್ನು ದೂರ ಮಾಡಿಕೊಳ್ಳಲು ಸಂಚು ರೂಪಿಸಿದಳು.

ಆನಾರೋಗ್ಯದಿಂದ 2022ರ ಅ.14ರಂದು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಶರೋನ್‌ಗೆ ಗ್ರೀಷ್ಠಾ, ಆಯುರ್ವೇದ ಔಷಧಕ್ಕೆ ಕಳೆನಾಶಕ ಪ್ಯಾರಾಕ್ವಾಟ್ ಡೈಕ್ಲೋರೈಡ್ ಮಿಶ್ರಣ ಮಾಡಿ ಕುಡಿಸಿ ಸಾವಿಗೆ ಕಾರಣಳಾಗಿದ್ದಳು ಎಂದು ವರದಿಯಾಗಿದೆ.