ನವದೆಹಲಿ (Padma Award): ಕೇಂದ್ರ ಸರ್ಕಾರ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವಗಳೆಂದೇ ಮನ್ನಣೆ ಗಳಿಸಿರುವ ಪದ್ದ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹಿರಿಯ ನಟ ಅನಂತ್ ನಾಗ್ ಸೇರಿ ಕರ್ನಾಟಕದ ಒಂಬತ್ತು ಸಾಧಕರು ಭಾಜನರಾಗಿದ್ದಾರೆ.
ಲಕ್ಷ್ಮೀನಾರಾಯಣ ಸುಬ್ರಮಣಿಯಂ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದ್ದರೆ, ಎ.ಸೂರ್ಯಪ್ರಕಾಶ್ ಮತ್ತು ಹಿರಿಯ ನಟ ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದೆ.
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ(ಕಲೆ), ಹಾಸನ್ ರಘು(ಕಲೆ), ಪ್ರಶಾಂತ್ ಪ್ರಕಾಶ್(ವಾಣಿಜ್ಯ ಮತ್ತು ಉದ್ಯಮ) ರಿಖಿ ಗ್ಯಾನ್ ಕೇಜ್(ಕಲೆ), ವೆಂಕಪ್ಪ ಅಂಬಾಜಿ ಸುಗತೇಕರ್(ಕಲೆ) ಮತ್ತು ವಿಜಯಲಕ್ಷ್ಮೀ ದೇಶಮನೆ(ವೈದ್ಯಕೀಯ) ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ಈ ಬಾರಿ ಒಟ್ಟು 139 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದ್ದು, ಇದರಲ್ಲಿ ಏಳು ಮಂದಿಗೆ ಪದ್ಮವಿಭೂಷಣ, 19 ಮಂದಿಗೆ ಪದ್ಮಭೂಷಣ ಮತ್ತು 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 23 ಮಂದಿ ಮಹಿಳೆಯರು, 10 ಮಂದಿ ವಿದೇಶಿಯರು ಹಾಗೂ 1 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಲಾಗಿದೆ. ಈ ಬಾರಿಯೂ ಪ್ರಶಸ್ತಿ ನೀಡುವಲ್ಲಿ ಎಲೆಮರೆಯ ಕಾಯಿಗಳಿಗೇ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕ್ರೀಡೆಯಲ್ಲಿ ಪಿ.ಆರ್.ಶ್ರೀಜೇಶ್ ಅವರಿಗೆ ಪದ್ಮಭೂಷಣ ನೀಡಿರುವುದು ವಿಶೇಷ. ಉಳಿದಂತೆ ಇದೇ ವಿಭಾಗದಲ್ಲಿ ಹರ್ಯಾಣದ ಹರ್ವೀಂದರ್ ಸಿಂಗ್, ಕೇರಳದ ಇನ್ವಿಲಪ್ಟಿಲ್ ಮಣಿ ವಿಜಯನ್, ತಮಿಳುನಾಡಿನ ಆರ್.ಅಶ್ವಿನ್, ಉತ್ತರ ಪ್ರದೇಶದ ಸತ್ಯಪಾಲ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ,ಎಸ್. ಖೇಹರ್, ಸುಜುಕಿ ಮುಖ್ಯಸ್ಥ ಒಸಾಮು ಸುಜುಕಿ, ಜಾನಪದ ಗಾಯಕಿ ದಿವಂಗತ ಶಾರದಾಸಿನ್ಹಾಮತ್ತು ಮಾಜಿ ಕ್ರಿಕೆಟಿಗಆರ್.ಅಶ್ವಿನ್‌ಸೇರಿದಂತೆ 139 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಭಾರತಕ್ಕೆ ಮಾರುತಿ ಸುಝುಕಿ ಕಾರು ಪರಿಚಯಿಸಿದ ಜಪಾನ್ ಉದ್ಯಮಿ ಒಸಾಮು ಸುಜುಕಿ, ಮಲಯಾಳಂ ಸಾಹಿತ್ಯದ ದಂತಕಥೆ ಎಂಟಿವಾಸುದೇವನ್ ನಾಯರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದ ಬಿಬೇಕ್ ದೆಬ್ರಾಯ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ / ಶಿವಸೇನೆಯ ಘಟಾನುಘಟಿ ಮನೋಹರ್ ಜೋಶಿ, ಗಜಲ್ ಗಾಯಕ ಪಂಕಜ್ ಉಧಾಸ್, ಖ್ಯಾತ ನಟ ಅನಂತ ನಾಗ್, ನಟಿ ಶೋಭನಾ, ಹಿಂದೂ ಫೈರ್‌ಬ್ರಾಂಡ್ ನಾಯಕಿ ಸಾದ್ವಿ ಋತಾಂಬರಾ, ನಟ ಅಜಿತ್ ಕುಮಾರ್ ಸೇರಿದಂತೆ 19 ಮಂದಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.
ತೆಲುಗು ಸೂಪರ್‌ಸ್ಟಾರ್ ನಂದಮೂರಿ ಬಾಲ ಕೃಷ್ಣ, ಎಸ್ ಬಿಐ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಸಂಗೀತಗಾರ ರಿಕ್ಕಿ ಕೇಜ್, ರಾಮಮಂದಿರ ಶಿಲ್ಪಿಚಂದ್ರಕಾಂತ ಸೋಂಪುರ ಆವರಿಗೆ ಪದ್ಮಶ್ರೀ ಸಂದಿದೆ.
ಕನ್ನಡಿಗರ ಅಭಿಯಾನ
ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕುರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ ಭಾಜನರಾಗಿರುವ ಮೇರು ನಟನಿಗೆ ಪದ್ಮ ಶ್ರೀ ಗೌರವ ಇದುವರೆಗೂ ನಿಲುಕದ ಪದಕ ವಾಗಿತ್ತು.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮುಂತಾದ ಅವರಿಗೆ ದಶಕದ ಹಿಂದೆಯೇ ಪದ್ಮ ಶ್ರೀ ಪುರಸ್ಕಾರ ಸಿಕ್ಕಿತ್ತು. ಇದರಿಂದ ಬೇಸರಗೊಂಡಿದ್ದ ಕನ್ನಡ ಚಿತ್ರ ಪ್ರೇಮಿಗಳು ಅನಂತ್ ನಾಗ್ ಅವರಿಗೆ ಪದ್ಮ ಗೌರವ ಕೊಡಲೇಬೇಕೆಂದು ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ್ದ ಅನಂತ್ ನಾಗ್, ತಮ್ಮ ಹೆಸರಿನಲ್ಲಿ ಪ್ರಶಸ್ತಿ ಗಾಗಿ ಯಾರೂ ಅಭಿಯಾನ ನಡೆಸಬಾರದು ಎಂದು ಮನವು ಮಾಡಿದ್ದರು.
ಚಿತ್ರೋದ್ಯಮದ ಅನೇಕ ಕಿರಿಯರಿಗೆ ಪದ್ಮಶ್ರೀ ಸಿಕ್ಕಿರುವ ಹಿನ್ನೆಲೆಯಲ್ಲಿ ಅನಂತ್ ನಾಗ್ ಈ ಹಂತ ದಲ್ಲಿ ಪ್ರಶಸ್ತಿ ಸ್ವೀಕರಿಸಬಾರದು ಎಂಬ ಮಾತುಗಳೂ ಕೇಳಿ ಬಂದಿದ್ದವು. ಈ ಆಕ್ರೋಶ ಸಹಜವೂ ಆಗಿತ್ತು. ಮೇರು ಗಾಯಕಿ ಎಸ್. ಜಾನಕಿ ಅವರು ಇಂಥದ್ದೇ ಸನ್ನಿವೇಶದಲ್ಲಿ ಕೆಲ ವರ್ಷಗಳ ಹಿಂದೆ ಪದ್ಮ ಪುರಸ್ಕಾರ ವನ್ನು ನಿರಾಕರಿಸಿದ್ದರು.
ಇದೀಗ ಕೇಂದ್ರ ಸರಕಾರ ಅನಂತ್ ಅವರನ್ನು ನೇರವಾಗಿ ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆ ಮಾಡುವ ಮೂಲಕ ಈ ವಿವೇಚನಾಯುಕ್ತ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಅನಂತ್ ಮತ್ತವರ ಸಹಜ ನಟನೆಯ ಅಭಿಮಾನಿಗಳ ಭಾವನೆಗಳನ್ನು ಗೌರವಿಸಿದೆ.