ಬೆಂಗಳೂರು: ಬಾಗಿಲು ಮುಚ್ಚಿಕೊಂಡು ಗುಪ್ತ ಗುಪ್ತವಾಗಿ ನಡೆಸುತ್ತಿದ್ದ ಗ್ರಾಮ ಪಂಚಾಯತಿಗಳ (Grama panchayath) ಸಭೆಗಳನ್ನು ಸಾರ್ವಜನಿಕರು ನೋಡಲು ಅವಕಾಶ ಕಲ್ಪಿಸುವ ವೇದಿಕೆ ಸಿದ್ದವಾಗಿದೆ.
ಸರ್ಕಾರದ ಆದೇಶದ ಅನ್ವಯ “ಗ್ರಾಮ ಪಂಚಾಯತಿಗಳ ಸಭೆಗಳು ಮತ್ತು ಗ್ರಾಮ ಸಭೆಗಳ ಕಾರ್ಯಕಲಾಪಗಳನ್ನು ನೇರ ಪ್ರಸಾರ ಮಾಡಲಾಗುವುದು ಎಂದು ಘೋಷಿಸಲಾಗಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಈ ಪತ್ರದ ಅನ್ವಯ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ರನ್ನಯ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಸಭೆ ಮತ್ತು ಗ್ರಾಮ ಪಂಚಾಯತಿ ಸಭೆಗಳನ್ನು ಆಯೋಜಿಸಬೇಕಾಗಿರುತ್ತದೆ.
ನೇರ ಪ್ರಸಾರ
ಗ್ರಾಮ ಪಂಚಾಯತಿಗಳ ಎಲ್ಲಾ ಸಭೆಗಳ ಆಯೋಚಿಸುವಿಕೆ, ನಡೆಸುವ ವಿಧಾನ, ಹಾಜರಾತಿ ಪಡೆಯುವ ಪ್ರಕ್ರಿಯೆ ಮತ್ತು ಸಭಾ ನಡವಳಿಗಳನ್ನು ಡಿಜಿಟಲ್ ಸಾಧನಗಳ ಮೂಲಕ ತಯಾರಿಸುವ ಪ್ರಕ್ರಿಯೆಗಳಲ್ಲಿ ಸುಧಾರಣೆ, ಶಿಸ್ತು, ಸ್ಥಿರತೆ ಮತ್ತು ಏಕರೂಪತೆ ತರುವ ಉದ್ದೇಶ ಹೊಂದಲಾಗಿದೆ.
ಗ್ರಾಮ ಪಂಚಾಯತಿಗಳ ಸಭೆಗಳಲ್ಲಿ ತೆಗೆದುಕೊಂಡಿರುವ ನಿರ್ಣಯಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅಭಿವೃದ್ಧಿಪಡಿಸಲಾದ ಪಂಚತಂತ್ರ 2.0 ತಂತ್ರಾಂಶದಡಿ “Meeting Management” ಮಾಡ್ಯುಲ್ ಅನ್ನು ಅಭಿವೃದ್ಧಿಪಡಿಸಿ, ಅನುಷ್ಠಾನಗೊಳಿಸಲಾಗಿದೆ.
ಇದರೊಂದಿಗೆ ಗ್ರಾಮ ಪಂಚಾಯತಿಗಳಲ್ಲಿ ಆಯೋಜಿಸಲಾಗುವ ಗ್ರಾಮ ಪಂಚಾಯತಿ ಸಭೆಗಳು ಮತ್ತು ಗ್ರಾಮ ಸಭೆಗಳ ತೆಗೆದುಕೊಂಡಿರುವ ನಿರ್ಣಯಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸದರಿ ಸಭೆಗಳ ಕಾರ್ಯಕಲಾಪಗಳನ್ನು ನೇರ ಪ್ರಸಾರ ಮಾಡಲು ನಿರ್ಧರಿಸಿದೆ.
ಅದರಂತೆ, ಉಚಿತವಾಗಿ ಲಭ್ಯವಿರುವ ಮಾಧ್ಯಮಗಳಾದ ಯೂಟ್ಯೂಬ್ (Youtube-Free License) ಮಾಧ್ಯಮದ ಮೂಲಕ ಅಥವಾ ಸ್ಥಳೀಯ cable channel ಗಳ ಮೂಲಕ ಗ್ರಾಮ ಪಂಚಾಯತಿ ಸಭೆಗಳು ಮತ್ತು ಗ್ರಾಮ ಸಭೆಗಳ ಕಾರ್ಯಕಲಾಪಗಳನ್ನು ನೇರ ಪ್ರಸಾರ ಮಾಡುವಂತೆ ಕ್ರಮವಹಿಸಲು ಸೂಚಿಸಿದ್ದಾರೆ.