ದೊಡ್ಡಬಳ್ಳಾಪುರ (Doddaballapura): ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಗಾಗ ತಗಾದೆ ತೆಗೆಯುತ್ತಿರುವ ಮರಾಠಿ ಸಂಘಟನೆಗಳ ವಿರುದ್ಧ ಇಂದು (ಶನಿವಾರ) ಕರ್ನಾಟಕ ಬಂದ್ ಮಾಡುವ ಮೂಲಕ ಎಚ್ಚರಿಕೆ ನೀಡಲು ಕನ್ನಡ ಪರ ಸಂಘಟನೆಗಳು ಸಜ್ಜಾಗಿವೆ.
ಆದರೆ ದೊಡ್ಡಬಳ್ಳಾಪುರದಲ್ಲಿ ಬಂದ್ ಎಫೆಕ್ಟ್ ಯಾವುದೇ ಪರಿಣಾಮ ಬೀರಿಲ್ಲವಾಗಿದ್ದು, ಜನಜೀವನ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಕನ್ನಡಪರ ಸಂಘಟನೆಗಳು ದೊಡ್ಡಬಳ್ಳಾಪುರದಲ್ಲಿ ಬಂದ್ ಆಚರಿಸದೇ ಇರಲು ನಿರ್ಧರಿಸಿವೆ.
ಕರ್ನಾಟಕ ಬಂದ್ ಕುರಿತಂತೆ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ವಿವಿಧ ಕನ್ನಡಪರ ಹಾಗೂ ರೈತ ಪರ ಸಂಘಟನೆಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.
ಸಭೆಯಲ್ಲಿನ ಕನ್ನಡಪರ ಸಂಘಟನೆಗಳ ಮುಖಂಡರ ಅಭಿಪ್ರಾಯದಂತೆ, ಬಂದ್ ಆಚರಿಸದೇ ಪ್ರತಿಭಟನೆ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ.
ಪ್ರಸ್ತುತ ಎಸ್‍ಎಸ್‍ಎಲ್‍ಸಿ ಹಾಗೂ ಕಾಲೇಜು ಪರೀಕ್ಷೆಗಳು ನಡೆಯುತ್ತಿವೆ. ಬಂದ್‍ನಿಂದಾಗಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುವುದು ಬೇಡ ಎಂಬುದು ಹೋರಾಟಗಾರರ ನಿಲುವು.
ಬೆಳಗಾವಿಯಲ್ಲಿ ಕನ್ನಡ ಮಾತನಾಡಿ ಎಂದ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕನ ಮೇಲೆ ಹಲ್ಲೆ, ಪಂಚಾಯಿತಿ ಅಭಿವೃದ್ಧಿ ಅಕಾರಿ ಮೇಲೆ ಹಲ್ಲೆ ಪ್ರಕರಣಗಳು ಕನ್ನಡಿಗರ ಸ್ವಾಭಿಮಾನ ಕೆಣಕಿವೆ. ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಗೆ ಅಪಮಾನವಾಗುತ್ತಿರುವುದು ಖಂಡನೀಯ. ಬೆಳಗಾವಿಯಲ್ಲಿ ಸದಾ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿರುವ ಎಂ.ಇ.ಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ನಿಷೇಧಿಸಬೇಕು.
ಹಲ್ಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆಯಾಗಿ ಎಂ.ಇ.ಎಸ್ ಪುಂಡರನ್ನು ಗಡಿಪಾರು ಮಾಡಬೇಕು. ನಾಡಿನ ನೆಲ ಜನ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ ನಿಲ್ಲಬೇಕು. ಪರಭಾಷಿಕರ ದಬ್ಬಾಳಿಕೆ ನಿಲ್ಲಬೇಕು. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗಬೇಕು. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಲು ಹೋರಾಟ ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ಕನ್ನಡಪರ ಹಾಗೂ ರೈತ ಪರ ಸಂಘಟನೆಗಳಿಂದ ನಗರದ ಸಿದ್ದಲಿಂಗಯ್ಯ ವೃತ್ತದ ಬಳಿಯಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸುತ್ತಿವೆ.
ಅಲ್ಲದೆ ಉಪವಿಭಾಗಾಧಿಕಾರಿಗಳ ಕಚೇರಿಯ ಮುಂದೆ ಸಮಾವೇಶಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಿವೆ.
ಬಂದ್‍ಗೆ ನಮ್ಮ ಬೆಂಬಲವಿಲ್ಲ. ತಾಲೂಕಿನ ಇತರ ಸಂಘಟನೆಗಳು ಬಂದ್ ಮಾಡಲು ಹೊರಟು, ಯಾವುದೇ ತೊಂದರೆಗಳಾದರೆ ನಮ್ಮ ಸಂಘಟನೆಗಳು ಹೊಣೆಯಲ್ಲ ಎಂದು ಈಗಾಗಲೆ ಸಂಘಟನೆಗಳು ಸ್ಪಷ್ಟಪಡಿಸಿವೆ.